ಕುಮಟಾ: ಮಂಗಳೂರಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ತಾಲೂಕಿನ ಅಘನಾಶಿನಿ ಸರಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸುಗ್ಗಿ ಕುಣಿತ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.
ತಾಲೂಕಿನ ಅಘನಾಶಿನಿಯ ಹಾಲಕ್ಕಿ ಸುಗ್ಗಿ ಕುಣಿತ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಂಸ್ಕೃತಿಕ ಜನಪದ ಸೊಗಡನ್ನು ಹರಡುವಲ್ಲಿ ಯಶಸ್ವಿಯಾಗಿದೆ. ಅದೇ ಸಂಸ್ಕೃತಿಯ ಜನಪದ ಪರಂಪರೆಯನ್ನು ಅಘನಾಶಿನಿಯ ಹಾಲಕ್ಕಿ ಮಕ್ಕಳು ಮುಂದುವರಿಸಿಕೊoಡು ಹೋಗುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಗ್ರಾಮೀಣ ಭಾಗದ ಮಕ್ಕಳು ಎಲ್ಲಾ ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನು ಹೊಂದಿದ್ದು, ಆ ಪ್ರತಿಭೆಯನ್ನು ಅನಾವರಣಗೊಳಿಸುವ ಇಚ್ಛಾಶಕ್ತಿ ಪಾಲಕರಲ್ಲಿ, ಶಿಕ್ಷರದಲ್ಲಿ , ಸಂಘಟಕರಲ್ಲಿ ಇದ್ದರೆ ಖಂಡಿತ ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸಲು ಸುಲಭವಾಗುತ್ತದೆ. ಆ ನಿಟ್ಟಿನಲ್ಲಿ ಅಘನಾಶಿನಿಯ ಹಾಲಕ್ಕಿ ಮಕ್ಕಳು ನಮ್ಮ ಸುಗ್ಗಿಯ ಸೊಗಡನ್ನು ಮಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಸ್ಕೌಟ್ ತರಬೇತುದಾರರಾದ ಕೆ. ಪಿ. ಭಂಡಾರಿ ಅವರು ಗ್ರಾಮೀಣ ಮಕ್ಕಳ ಮೇಲೆ ನಂಬಿಕೆಯಿಟ್ಟು ಸ್ಕೌಟ್ ತರಬೇತಿ ನೀಡಿದರು. ಇವರ ಜತೆಗೆ ಶಿಕ್ಷಕ ವೃಂದವು ಗಟ್ಟಿಯಾಗಿ ನಿಂತ ಪರಿಣಾಮವಾಗಿ ಅಘನಾಶಿನಿ ಹಾಲಕ್ಕಿ ಸಮಾಜದ ಪರಿಶುದ್ಧ ಜನಪದ ಕಾಳಜಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ವೇದಿಕೆಯಲ್ಲಿ ಅನಾವರಣಗೊಳ್ಳುವಂತಾಯಿತು. ಮಕ್ಕಳಿಗೆ ಸುಗ್ಗಿ ಕುಣಿತ ತರಬೇತಿ ನೀಡಿದ ಹಾಲಕ್ಕಿ ಸಮಾಜದ ಪ್ರತಿಯೊಬ್ಬ ಹಿರಿಯರು ನಮ್ಮ ಸಾಂಸ್ಕೃತಿಕ ರಾಯಭಾರಿಯಾಗಿ ನಿಲ್ಲುವಂತಾಯಿತು.