ಕಾರವಾರ: ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ನಗರ ಸಂಚಾರ ಪೊಲೀಸ್ ಠಾಣೆ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಗರದ ಆಟೋ ಚಾಲಕರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ರೊಟರಿ ಕ್ಲಬ್‌ನ ಶತಾಬ್ದಿಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನಗರ ಠಾಣೆಯ ಇನ್ಸ್ಪೆಕ್ಟರ್ ಸಿದ್ದಪ್ಪ ಬಿಳಗಿ ಉದ್ಘಾಟಿಸಿ ಮಾತನಾಡಿ, ಅಪರಾಧ ತಡೆ ಮಾಸಾಚರಣೆಯ ಭಾಗವಾಗಿ ಹಗಲಿರುಳು ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಡ ಮತ್ತು ಶ್ರಮಿಕ ವರ್ಗದ ಆಟೋ ಚಾಲಕರಿಗೆ ಉಚಿತ ಕಣ್ಣು ತಪಾಸಣಾ ಶಿಬಿರ ಏರ್ಪಡಿಸಿದ ರೋಟರಿ ಕ್ಲಬ್ ಮತ್ತು ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾದುದು ಎಂದು ಹರ್ಷ ವ್ಯಕ್ತಪಡಿಸಿದರು. ವಾಹನ ಚಲಾಯಿಸಲು ಮಾನಸಿಕ ಮತ್ತು ದೈಹಿಕ ಆರೋಗ್ಯದ ಸದೃಢತೆ ಅಗತ್ಯ ನಿಟ್ಟಿನಲ್ಲಿ ಆಟೋಚಾಲಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
200ಕ್ಕೂ ಅಧಿಕ ಆಟೊ ಚಾಲಕರು ಕಣ್ಣು ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. ಕ್ರಿಮ್ಸ್ನ ನೇತ್ರ ತಜ್ಞ ವೈದ್ಯ ರಮೇಶ ವೆಂಕಿಮನೆ, ಆಧಾರ್ ನಾಯ್ಕ ಹಾಗೂ ವೈದ್ಯ ಯೋಗಿಶ್ ಭಂಡಾರ್ಕರ್ ತಪಾಸಣೆ ನಡೆಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಿದರು. ಕಾರ್ಯಕ್ರಮದಲ್ಲಿ ನಗರ ಸಂಚಾರ ಠಾಣೆಯ ಪಿಎಸ್‌ಐ ನಾಗಪ್ಪ ಬಿ., ರೋಟರಿ ಕ್ಲಬ್‌ನ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು, ಆಟೋ ಯೂನಿಯನ್ ಮುಖಂಡ ಸುಭಾಷ ಗುನಗಿ ಹಾಗೂ ರೋಟರಿ ಕ್ಲಬ್‌ನ ಸದಸ್ಯರು, ಸಂಚಾರ ಠಾಣೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.