ಕುಮಟಾ: ಪಟ್ಟಣದ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ ನಿಮಿತ್ತ ಆಯ್ದ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ತಾಲೂಕು ರೈತ ಸಲಹಾ ಸಮಿತಿ ಅಧ್ಯಕ್ಷ ವಿನೋದ ಎಂ.ಹೆಗಡೆ ಉದ್ಘಾಟಿಸಿ, ಮಾತನಾಡಿದ ಅವರು, ದೇಶವನ್ನು ರಕ್ಷಿಸುವ ಮತ್ತು ನಾಶಪಡಿಸುವ ಶಕ್ತಿ ರೈತರಲ್ಲಿದೆ. ಈಗಿನ ವಿಷಪೂರಿತ ಆಹಾರ ಪದಾರ್ಥಗಳಿಂದ ಜನರ ಆರೋಗ್ಯದ ಮಟ್ಟದ ಕುಸಿದಿದೆ. ಜನರು ಆರೋಗ್ಯವಂತರಾಗಿರಲು ಶುದ್ಧ ಆಹಾರ ಪದಾರ್ಥಗಳನ್ನು ಸೇವಿಸಬೇಕು. ರೈತರು ವಿಷಕಾರಿ ರಾಸಾಯನಿಕ ಗೊಬ್ಬರ ಬಳಸದೇ ಸಾವಯವ ಗೊಬ್ಬರದಿಂದಲೇ ಬೆಳೆದ ಆಹಾರಧ್ಯಾನಗಳನ್ನೆ ಜನರಿಗೆ ನೀಡಿದರೆ ದೇಶದ ಆರೋಗ್ಯ ವೃದ್ಧಿಯಾಗಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕಿ ರಷ್ಮೀ ಸಹಾಪುರಮಠ, ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮ ದಿನವನ್ನು ಕಿಸಾನ್ ದಿನಾಚರಣೆಯಾಗಿ ಆಚರಿಸುತ್ತೇವೆ. ಅವರು ನೀಡಿದ ರೈತಪರ ಯೋಜನೆಗಳಿಂದ ರೈತರ ಬಾಳು ಹಸನಾಗಿದೆ. ದೇಶದಲ್ಲಿ ಕೃಷಿಗೆ ಹೆಚ್ಚಿನ ಯೋಜನೆಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರ ಜನ್ಮ ದಿನವನ್ನು ರೈತ ದಿನಾಚರಣೆಯಾಗಿ ಆಚರಿಸುವ ಮೂಲಕ ಸರ್ಕಾರದ ಯೋಜನೆಯನ್ನು ರೈತರಿಗೆ ತಲುಪಿಸುವ ಜೊತೆಗೆ ಹೊಸ ಹೊಸ ಕೃಷಿ ಆವಿಷ್ಕಾರಗಳ ಬಗ್ಗೆ ರೈತರಿಗೆ ತಿಳುವಳಿಕೆ ನೀಡುವ ಮೂಲಕ ಕೃಷಿಯನ್ನು ಪೋಷಿಸುವ ಕಾರ್ಯ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಪತ್ರ ಮತ್ತು 25 ಸಾವಿರ ರೂ. ನಗದು ಪುರಸ್ಕಾರವನ್ನು ನಾಗೇಶ ಗೌಡ ಅವರಿಗೆ ನೀಡಿ ಗೌರವಿಸಲಾಯಿತು. ಕೃಷಿಯ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ತಾಲೂಕು ಮಟ್ಟದ ಪ್ರಶಸ್ತಿ ಮತ್ತು 10 ಸಾವಿರ ರೂ. ನಗದು ಬಹುಮಾನವನ್ನು ಕಾಮಾಕ್ಷಿ ನಾಯ್ಕ, ರಾಮಚಂದ್ರ ದೇಸಾಯಿ, ರಾಜು ಭಟ್, ಯಶವಂತ ಗಾವಡಿ, ಅರವಿಂದ ನಾಯ್ಕ ಮತ್ತು ಗೋವಿಂದ ಗೌಡ ಅವರಿಗೆ ವಿತರಿಸಲಾಯಿತು. ಪ್ರಶಸ್ತಿ ಪಡೆದ ಪ್ರಗತಿಪರ ರೈತರಾದ ಅರವಿಂದ ನಾಯ್ಕ ಮತ್ತು ರಾಮಚಂದ್ರ ದೇಸಾಯಿ ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನಿವೃತ್ತ ಎಸಿಎಫ್ ಭಗವಾನ್ ದಾಸ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್ ವಿ ಹೆಗಡೆ, ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಶೈಲಾ ಶೇಣ್ವಿ ಇತರರು ಇದ್ದರು