ನ್ನಾವರ: ಸಾಲ ಕೊಟ್ಟು ವಸೂಲಿ ಮಾಡುವ ಸಂಸ್ಥೆ ಧರ್ಮಸ್ಥಳ ಸಂಘವಾಗಿರದೇ ಜನರ ಜೀವನದ ಚಿತ್ರಣ ಬದಲಾಯಿಸುವ ಸಂಸ್ಥೆಯಾಗಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಕಿ ವಲಯದ ವತಿಯಿಂದ ಕೊಕ್ಕೇಶ್ವರದ ರಾಮಕ್ಷತ್ರೀಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ, ಜನಪ್ರತಿನಿಧಿ ಮಾಡುವ ಕಾರ್ಯ ಧರ್ಮಸ್ಥಳ ಸಂಘ ಮಾಡುತ್ತಾ ಬಂದಿದೆ. ಕಷ್ಟದಲ್ಲಿರುವರನ್ನು ಹುಡುಕಿ ಸಹಕಾರ ನೀಡುವ ಜೊತೆಗೆ ಮನೆ ಮನೆಗೆ ವಿವಿಧ ಸೌಲಭ್ಯ ನೀಡುತ್ತಾ ಬಂದಿದೆ. ಸರ್ಕಾರದಿಂದಲೂ ನಿಷ್ಠೆ, ಮೌಲ್ಯಧಾರಿತ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ. ಧಾರ್ಮಿಕ, ಶೈಕ್ಷಣಿಕ ಕೊಡುಗೆ ನೀಡುವ ಮೂಲಕ ಗ್ರಾಮಾಭಿವೃದ್ಧಿ ಯೋಜನೆ ಇಡೀ ರಾಜ್ಯದಲ್ಲಿ ಹೆಮ್ಮರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸಕ ಮುಗ್ವಾ ಸಂಸ್ಕೃತ ಪಾಠಶಾಲೆಯ ಉಪನ್ಯಾಸಕ ಡಾ.ಕೇಶವ ಭಟ್ ಮಾತನಾಡಿ, ಇಂದು ಧಾರ್ಮಿಕ ಸೇವೆಯ ಹೆಸರಿನಲ್ಲಿ ವ್ಯಾಪಾರೀಕರಣ ನಡೆಯುತ್ತಿದೆ. ಆದರೆ ಯೋಜನೆಯು ಸಾಮೂಹಿಕ ಸತ್ಯನಾರಾಯಣ ಪೂಜೆಯ ಮೂಲಕ ಜಗತ್ತಿಗೆ ಒಳಿತಾಗುವಂತೆ ಪ್ರಾರ್ಥಿಸುವ ಕಾರ್ಯ ಮಾದರಿಯಾಗಿದೆ. ಸಂಸ್ಕೃತಿ, ಸಂಸ್ಕಾರ ಮೂಡಿಸುವ ಕಾರ್ಯ ಯೋಜನೆ ಮಾಡುತ್ತಾ ಬಂದಿದ್ದು, ಸನಾತನ ಧರ್ಮದ ಆಚರಣೆಯನ್ನು ಮುಂದಿನ ತಲೆಮಾರಿಗೂ ಪರಿಚಯಿಸಲು ಇಂತಹ ಕಾರ್ಯ ಬಹುಮುಖ್ಯವಾಗಿದೆ ಎಂದರು.
ಪೂಜಾ ಸಮಿತಿ ಅಧ್ಯಕ್ಷ ರಾಜು ನಾಯ್ಕ ಮಂಕಿ ಮಾತನಾಡಿ, ನಮ್ಮ ಭಾಗದಲ್ಲಿ 15 ವರ್ಷದಿಂದ ಹಲವು ಸಮಾಜಮುಖಿ ಕಾರ್ಯದ ಮೂಲಕ ಯೋಜನೆ ಜನಮನ್ನಣೆ ಪಡೆದಿದೆ. ಯೋಜನೆಯ ಎಲ್ಲಾ ಕಾರ್ಯಕ್ರಮವು ಮಾದರಿಯಾಗಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಜನತೆಯು ಹಲವು ವಿಧದಲ್ಲಿ ಪ್ರಯೋಜನ ಪಡೆದಿದ್ದಾರೆ ನಮ್ಮ ಗ್ರಾಮ ಇಂದಿನ ಬದಲಾವಣೆಯಲ್ಲಿ ಯೋಜನೆಯ ಪಾತ್ರವು ಬಹುಮುಖ್ಯವಾಗಿದೆ ಎಂದರು.
ಜನಮoಗಲ ಕಾರ್ಯಕ್ರಮದಡಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾದ ವ್ಹೀಲ್ ಚೇರ್, ಮಾಶಾಸನ, ಕೃಷಿ ಅನುದಾನದ ಮಂಜೂರಾತಿ ಪತ್ರವನ್ನು ಇದೇ ವೇಳೆ ಗಣ್ಯರು ಹಸ್ತಾಂತರಿಸಿದರು. ವೇದಿಕೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ ಶೆಟ್ಟಿ, ರಾಮಕ್ಷತ್ರೀಯ ಸಭಾಭವನ ಸಮಿತಿ ಅಧ್ಯಕ್ಷರಾದ ಅಧ್ಯಕ್ಷ ಎಮ್.ಎನ್.ನಾಯ್ಕ, ವಿ.ಎಸ್.ಎಸ್. ಅಧ್ಯಕ್ಷ ಚಂದ್ರಶೇಖರ ಗೌಡ, ಊರಿನ ಮುಖಂಡರಾದ ವಾಮನ ನಾಯ್ಕ, ಅಣ್ಣಪ್ಪ ನಾಯ್ಕ, ಸುಬ್ರಾಯ ನಾಯ್ಕ, ಮೇಲ್ವಿಚಾರಕ ಅಶೋಕ ಸ್ವಾಗತಿಸಿ, ಯೋಜನಾಧಿಕಾರಿ ಗಣೇಶ ಪ್ರಾಸ್ತವಿಕವಾಗಿ ಯೋಜನೆಯ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು. ಜ್ಞಾನವಿಕಾಸ ಸಮನ್ವಾಯಧಿಕಾರಿ ವಿನೋದಾ ಕಾರ್ಯಕ್ರಮ ನಿರ್ವಹಿಸಿ ಸೇವಾಪ್ರತಿನಿಧಿ ಜಯಂತ ವಂದಿಸಿದರು. ಯೋಜನೆಯ ಕಾರ್ಯಕರ್ತರು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರು,ವಿಪತ್ತು ನಿರ್ವಹಣಾ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.