ದಾಂಡೇಲಿ : ನಗರದ ಶ್ರೀ ಅಯ್ಯಪ್ಪ ಸ್ವಾಮಿಯ ಶ್ರದ್ಧಾಕೇಂದ್ರವಾಗಿರುವ ಕುಳಗಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಡಿ ಬೆಳಿಗ್ಗೆಯಿಂದಲೆ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಅಯ್ಯಪ್ಪ ಮಾಲಾಧಾರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಹಾಪೂಜೆಯಾದ ಬಳಿಕ ಅನ್ನಪ್ರಸಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಶಾಸಕರಾದ ಆರ್.ವಿ.ದೇಶಪಾಂಡೆ, ಮಾಜಿ ಶಾಸಕರಾದ ಸುನೀಲ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ್ ಸೇರಿದಂತೆ ಗಣ್ಯ ಮಹನೀಯರು ಭಾಗವಹಿಸಿದ್ದರು. ಶಾಸಕ ಆರ್.ವಿ.ದೇಶಪಾಂಡೆಯವರು ಮತ್ತು ಮಾಜಿ ಶಾಸಕರಾದ ಸುನೀಲ ಹೆಗಡೆಯವರು ಭಕ್ತಾದಿಗಳಿಗೆ ಪಾಯಸ ಬಡಿಸಿ ಸಂಭ್ರಮಿಸಿದರು.
ಸಂಜ 6 ಗಂಟೆಗೆ ಇದೇ ಮೊದಲ ಬಾರಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಆನೆ ಅಂಬಾರಿ ಉತ್ಸವವನ್ನು ಹಮ್ಮಿಕೊಳ್ಳಲಾಯಿತು. ಅಂಬಾರಿ ಉತ್ಸವದ ಮುನ್ನ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಂಬಾರಿ ಹೊತ್ತ ಆನೆಗೆ ಆರತಿ ಬೆಳಗಿ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ನಗರದ ಶ್ರೀ ಅಯ್ಯಪ್ಪ ಸ್ವಾಮಿಯ ಮಂದಿರದಿಂದ ಆರಂಭಗೊಂಡ ಉತ್ಸವದ ಶೋಭಾಯಾತ್ರೆಯು ನಗರದ ಕುಳಗಿ ರಸ್ತೆ, ಜೆ.ಎನ್.ರಸ್ತೆ, ಸೋಮಾನಿ ವೃತ್ತ, ಲಿಂಕ್ ರಸ್ತೆ, ಕೆ.ಸಿವೃತ್ತದ ರಸ್ತೆಯಲ್ಲಿ ಸಾಗಿ ಶ್ರೀ.ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಸಂಪನ್ನಗೊಂಡಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಶ್ರೀ ಅಯ್ಯಪ್ಪನ ಆನೆ ಅಂಬಾರಿ ಉತ್ಸವವನ್ನು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಕಣ್ತುಂಬಿಕೊಂಡರು. ಶಿಸ್ತುಬದ್ದವಾದ ಹಾಗೂ ಧಾರ್ಮಿಕ ಶ್ರದ್ಧಾಭಾವನೆಯಿಂದ ನಡೆದ ಮೆರವಣಿಗೆಯಲ್ಲಿ ಉಡುಪಿ ಜಿಲ್ಲೆಯ ಚೆಂಡೆ ತಂಡವೂ ಭಾಗವಹಿಸಿತ್ತು. ಇತ್ತ ಮಹಿಳೆಯರು ಪೂರ್ಣಕುಂಭ ಕಲಶದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಅಯ್ಯಪ್ಪ ವೃತಾಧಾರಿಗಳು ಅಯ್ಯಪ್ಪನ ನಾಮಸ್ಮರಣೆಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಸಾಗಿ ಬರುತ್ತಿರುವ ಆನೆ ಎಲ್ಲರ ಗಮನ ಸೆಳೆದಿದ್ದು., ಆನೆಯ ಭಕ್ತಿ ಮತ್ತು ಶ್ರದ್ಧೆ ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದೆ. ಮೆರವಣಿಗೆಯ ಮುನ್ನ ಶ್ರೀ ಸ್ವಾಮಿ ಸನ್ನಿಧಿಯ ಮುಂಭಾಗಕ್ಕೆ ಬಂದಿದ್ದ ಆನೆಯನ್ನು ಕುಟುಂಬ ಸಮೇತರಾಗಿ ಬಂದಿದ್ದ ಭಕ್ತಾಭಿಮಾನಿಗಳು ನೋಡಿ, ದರ್ಶನ ಪಡೆದು ಆನಂದ ಪುಳಕಿತರಾದರು.
ಕಳೆದ ಅನೇಕ ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯು ಅಯ್ಯಪ್ಪ ಪೂಜಾ ವಿಧಿವಿಧಾನಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಬರುವುದರ ಮೂಲಕ ನಗರ ಹಾಗೂ ನಗರದ ಸುತ್ತಮುತ್ತಲ ಗ್ರಾಮದ ಅಯ್ಯಪ್ಪ ಭಕ್ತಾಧಿಗಳಿಗೆ ನಗರದ ಕುಳಗಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಪ್ರಧಾನ ಮಂದಿರವಾಗಿದೆ.
ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷರಾದ ಟಿ.ಆರ್.ಚಂದ್ರಶೇಖರ್, ಉಪಾಧ್ಯಕ್ಷರಾದ ಕೃಷ್ಣ ಪೂಜಾರಿ ಮತ್ತು ಸುಧಾಕರ ಶೆಟ್ಟಿ, ಪ್ರಧಾನ ಕಾರ‍್ಯದರ್ಶಿ ಎಸ್.ಸೋಮಕುಮಾರ್, ಸಹ ಕಾರ‍್ಯದರ್ಶಿ ಅನಿಲ್ ದಂಡಗಲ್, ಕೋಶಾಧಿಕಾರಿ ವಿಶ್ವನಾಥ್ ಶೆಟ್ಟಿ, ಗುರುಸ್ವಾಮಿ ಮೋಹನ ಸನದಿ, ಕಚೇರಿ ನಿರ್ವಾಹಕರಾದ ಸುರೇಶ ನಾಯರ್ ಮೊದಲಾದವರ ನೇತೃತ್ವದಲ್ಲಿ ನಡೆದ ಪೂಜಾ ಕರ‍್ಯಕ್ರಮದ ಯಶಸ್ಸಿಗೆ ಶ್ರೀ.ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಅಯ್ಯಪ್ಪ ಸ್ವಾಮಿ ಭಕ್ತ ವೃಂದ, ಅಯ್ಯಪ್ಪ ಮಾಲಾಧಾರಿಗಳು, ಸ್ಥಳೀಯ ಭಕ್ತಾಭಿಮಾನಿಗಳು, ಕುಳಗಿ ರಸ್ತೆಯ ಜೈ ಹನುಮಾನ್ ಭಕ್ತಿ ಸಮಿತಿ, ಹಳಿಯಾಳ ರಸ್ತೆಯ ಶ್ರೀ.ಗಜಾನನ ಯುವಕ ಮಂಡಳದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ನಗರ ಮತ್ತು ನಗರದ ಸುತ್ತಮುತ್ತಲ ನಾಗರಿಕರು, ಭಕ್ತಾಭಿಮಾನಿಗಳು ಸಹಕರಿಸಿದರು.