ಕುಮಟಾ: ಪಟ್ಟಣದ ಗಿಬ್ ಹೈಸ್ಕೂಲಿನ ರಾಜೇಂದ್ರ ಪ್ರಸಾದ ಹಾಲ್‌ನಲ್ಲಿ ಜಿಎಸ್‌ಬಿ ಸಮಾಜದ ‘ಹೂನಶೀತ ತೀಕ ಆಂಬಟ್’ ಎಂಬ ವಿನೂತನ ಕಾರ್ಯಕ್ರಮ ಯಶಸ್ವಿಯಾಯಿತು.
ಕುಮಟಾದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಿಎಸ್‌ಬಿ ಸಮಾಜ ಬಾಂಧವರಿಗಾಗಿ ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ ನೇತೃತ್ವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಔತಣ ಕೂಟದ ಜೊತೆಗೆ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಪವರ್ ಲಿಪ್ಟಿಂಗ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತಂದ ಸಮಾಜದ ವೆಂಕಟೇಶ ಪ್ರಭು ಅವರನ್ನು ಸನ್ಮಾನಿಸಲಾಯಿತು. ವೆಂಕಟೇಶ ಪ್ರಭು ಅವರನ್ನು ಸನ್ಮಾನಿಸಿದ ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ ಅವರು ಮಾತನಾಡಿ, ಕಾಮನವೆಲ್ತ್ ಕ್ರೀಡಾಕೂಟದಲ್ಲಿ ವವರ್ ಲಿಪ್ಟಿಂಗ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ದೇಶಕ್ಕೆ ಹೆಮ್ಮೆ ತಂದ ನಮ್ಮ ಸಮಾಜದ ವೆಂಕಟೇಶ ಪ್ರಭು ಕುಮಟಾದ ಹೆಮ್ಮೆಯ ಪುತ್ರನಾಗಿದ್ದು, ಜಿಎಸ್‌ಬಿ ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಜಿಎಸ್‌ಬಿ ಸಮಾಜದ ಯುವಕರು ವಿವಿಧ ರಂಗದಲ್ಲಿ ಸಾಧಿಸುವ ಮೂಲಕ ಸಮಾಜದ ಕೀರ್ತಿ ದೇಶಕ್ಕೆ ಸಾರಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ ಮಾತನಾಡಿ, ಜಿಎಸ್‌ಬಿ ಸಮಾಜ ಬಾಂಧವರೆಲ್ಲರನ್ನು ಒಗ್ಗೂಡಿಸುವ ಈ ಕಾರ್ಯಕ್ರಮ ಹಿಂದೆಯೇ ನಡೆಸಲು ಯೋಚಿಸಿದ್ದೇವು. ಕಾರಣಾತಂತರದಿಂದ ಸಾಧ್ಯವಾಗದೇ ಈಗ ಕೈಗೂಡಿದೆ. ಈ ವರ್ಷವೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ದೃಢ ಸಂಕಲ್ಪ ತೊಟ್ಟು ಕೇವಲ ನಾಲ್ಕೇ ದಿನದಲ್ಲಿ ಸಂಘಟಿಸಲಾಯಿತು. ಸಮಾಜ ಬಾಂಧವರಿಂದ ಉತ್ತಮ ಸ್ಪಂದನೆ ದೊರೆತ್ತಿದ್ದರಿಂದ ಸಾಧ್ಯವಾಯಿತು. ಪ್ರತೀ ವರ್ಷವೂ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿಯಲಿದೆ ಎಂದರು.
ಕೆನರಾ ಎಜ್ಯುಕೇಶನ್ ಸೊಸೈಟಿಯ ಕಾರ್ಯಾದ್ಯಕ್ಷ ವಸುದೇವ ಪ್ರಭು, ಶಾಂತೇರಿ ಕಾಮಾಕ್ಷಿ ದೇಗುಲದ ಅಧ್ಯಕ್ಷ ಶೇಷಗಿರಿ ಶಾನಭಾಗ, ವರಮಹಾಲಕ್ಷ್ಮಿ ಸಮಿತಿಯ ಅಧ್ಯಕ್ಷೆ ಮಾಲತಿ ಶಾನಭಾಗ, ಯುವ ಸೇವಾ ವಾಹಿನಿಯ ಅಧ್ಯಕ್ಷ ಪ್ರಸಾದ ವಿಷ್ನು ನಾಯಕ ಉಪಸ್ಥಿತರಿದ್ದರು. ನಿವೃತ್ತ ಗಣಿತ ಪ್ರಾಧ್ಯಾಪಕ ಎಚ್ ಎನ್ ಪೈ ಜಿಎಸ್‌ಬಿ ಸಮಾಜ ನಡೆದು ಬಂದ ದಾರಿಯನ್ನು ವಿವರಿಸಿದರು. ಬಳಿಕ ನಡೆದ ಶಿರಸಿಯ ಉಮೇಶ ಹಾಗೂ ರಮ್ಯಾ ನಾಯ್ಕ ತಂಡದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಯೋಗೇಶ ಕೋಡ್ಕಣಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.