ಹಳಿಯಾಳ: ಕೇಂದ್ರ ಶಿಕ್ಷಣ ಸಚಿವಾಲಯದ ವೈಜ್ಞಾನಿಕ ತಂತ್ರಜ್ಞಾನ ಮತ್ತು ಪರಿಭಾಷಾ ಆಯೋಗದ ಮಾರ್ಗದರ್ಶನದ ಮೇರೆಗೆ ಕೆ. ಎಲ್. ಎಸ್.ವಿ. ಡಿ. ಐ. ಟಿ. ಹಳಿಯಾಳದಲ್ಲಿ ತಾಂತ್ರಿಕ ಶಿಕ್ಷಣದ ಪರಿಭಾಷೆಯನ್ನು ಕನ್ನಡದಲ್ಲಿ ತೆರೆದಿಡುವ ಎರಡು ದಿನದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಡಿಸೆಂಬರ್ 21 ಮತ್ತು 22 ರಂದು ಆಯೋಜಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ -2020 ರ ಅಡಿಯಲ್ಲಿ ಕೈಗೊಂಡಿರುವ ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಆರ್. ವಿ. ತಾಂತ್ರಿಕ ಮಹಾವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ.ಎಸ್ ಸತ್ಯನಾರಾಯಣ ಮತ್ತು ಡಾ. ಅನಂತರಾಮ , ಬೆಂಗಳೂರಿನ ಸಂಸ್ಕೃತ ಭಾರತೀಯ ಸಂಕಲನಕಾರರಾದ ಡಾ. ಜನಾರ್ಧನ ಹೆಗಡೆ, ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನ ಸಹಾಯಕ ಅಧ್ಯಾಪಕರಾದ ಡಾ. ವಿ. ಎಸ್. ಹೆಗಡೆ, ಮೈಸೂರಿನ ಸಿ. ಐ. ಐ. ಎಲ್. ನ ಡಾ. ವಿಜಯಲಕ್ಷ್ಮಿ ಪಾಟೀಲ್, ಬೆಂಗಳೂರಿನಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ. ರಿಷಿದೇವ ಭಾರ್ಗವ ಆಗಮಿಸಲಿದ್ದಾರೆ.ಕೇಂದ್ರ ಶಿಕ್ಷಣ ಸಚಿವಾಲಯದ ವೈಜ್ಞಾನಿಕ ತಂತ್ರಜ್ಞಾನ ಮತ್ತು ಪರಿಭಾಷಾ ಆಯೋಗದ ಅಧ್ಯಕ್ಷರಾದ ಪ್ರೊ. ಗಿರೀಶ್ ನಾಥ್ ಜಾ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಿದ್ದಾರೆ. ಹಳಿಯಾಳದಿಂದ 100ಕಿಮಿ ವ್ಯಾಪ್ತಿಯಲ್ಲಿ ಬರುವ ತಾಂತ್ರಿಕ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರು ಹಾಗೂ ಆವಿಷ್ಕಾರ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಂದ್ರ ದೀಕ್ಷಿತ್ ಅವರು ಈ ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆಂದು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವಿ.ಎ. ಕುಲಕರ್ಣಿ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.