ಹೊನ್ನಾವರ: ಕನ್ನಡ ಭಾಷೆಯ ಬಗ್ಗೆ ಪ್ರತಿಯೊರ್ವರಿಗೂ ಅಭಿಮಾನ ಇರಬೇಕು ಎಂದು ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ವೇ. ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು.
ಅರೇಅಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಸಾಲ್ಕೋಡ್ ಹಾಗೂ ಹೊಸಾಕುಳಿ ಗ್ರಾಮದ ವತಿಯಿಂದ ಹಮ್ಮಿಕೊಂಡ ‘ನುಡಿಹಬ್ಬ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿ ಕನ್ನಡದ ಬಗ್ಗೆ ನಿರ್ಲಕ್ಷ್ಯ ಭಾವನೆ ಎದುರಾಗುತ್ತಿತ್ತು. ಆದರೆ ಎರಡು ಗ್ರಾಮದ ಯುವಕರು ಒಗ್ಗಟ್ಟಾಗಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಒಂದು ವೇದಿಕೆ ಕಲ್ಪಿಸಿ ಪ್ರತಿಭೆ ಪ್ರದರ್ಶಿಸಲು ಅವಕಾಶ ಲಭಿಸಿದೆ. ಗ್ರಾಮೀಣ ಭಾಗದಲ್ಲಿಯೂ ಅದ್ದೂರಿಯಾಗಿ ಇತರರಿಗೆ ಮಾದರಿಯಾಗುವಂತೆ ಕಾರ್ಯಕ್ರಮ ನಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಬಿಜೆಪಿ ಮುಖಂಡರಾದ ನಾಗರಾಜ ನಾಯ್ಕ ತೊರ್ಕೆ, ಜಿ.ಜಿ.ಶಂಕರ, ಕಾಂಗ್ರೇಸ್ ಮುಖಂಡರಾದ ರತ್ನಾಕರ ನಾಯ್ಕ, ಕೃಷ್ಣ ಗೌಡ, ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಭಾರಿ ಎಂ.ಜಿ.ಭಟ್, ಅಭಿಮಾನದ ನುಡಿಯ ಮೂಲಕ ಕನ್ನಡ ಭಾಷೆಗೆ ಗೌರವಿಸುವ ಮೂಲಕ ಕನ್ನಡಾಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಕನ್ನಡತನಕ್ಕೆ ಧಕ್ಕೆಯಾಗದಂತೆ ಪ್ರತಿಯೊರ್ವರು ಹೋರಾಟಕ್ಕೆ ಸನ್ನದ್ದರಾಗುವಂತೆ ಕರೆ ನೀಡಿದರು.
ನಿವೃತ್ತ ಸೈನಿಕ ಸುಬ್ರಹ್ಮಣ್ಯ ಭಟ್, ಸಮಾಜ ಸೇವಕರಾದ ಜಿ.ಆರ್.ಹೆಗಡೆ, ಶಿಕ್ಷಕರಾದ ಚಿದಾನಂದ ಭಂಡಾರಿ, ಸಂಗೀತ ಶಿಕ್ಷಕಿ ವಿದುಷಿ ಲಕ್ಷ್ಮೀ ಹೆಗಡೆ, ರೈತ ಸುಬ್ರಾಯ ಗೌಡ, ಅಂಚೆಅಣ್ಣ ಭಾಸ್ಕರ ನಾಯ್ಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಾಲ್ಕೋಡ್ ಗ್ರಾ.ಪಂ. ಅಧ್ಯಕ್ಷೆ ರಜನಿ ನಾಯ್ಕ, ಹೊಸಾಕುಳಿ ಗ್ರಾ.ಪಂ.ಅಧ್ಯಕ್ಷೆ ಸುರೇಖಾ ನಾಯ್ಕ, ಉದ್ದಿಮೆದಾರರಾದ ಸುರೇಶ ಶೆಟ್ಟು, ಎಸ್.ಕೆ.ನಾಯ್ಕ, ನಾಟಕ ಕಲಾವಿದ ಎಂ.ಎನ್.ನಾಯ್ಕ ಉಪಸ್ಥಿತರಿದ್ದರು. ರಜನಿ ನಾಯ್ಕ ಸ್ವಾಗತಿಸಿ, ಕಿರಣ ಹೆಗಡೆ ವಂದಿಸಿದರು. ಉಪನ್ಯಾಸಕ ಕೆ.ಎಸ್.ಹೆಗಡೆ, ಬಿಂದು ಅವಧಾನಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಮೊದಲು ಕನ್ನಡನಾಡು ನುಡಿ ಬಗ್ಗೆ ಅಭಿಮಾನ ಮೂಡಿಸುವ ಶಾಲಾ ಮಕ್ಕಳಿಂದ ನೃತ್ಯ, ಭರತನಾಟ್ಯ ಜರುಗಿತು. ಸಭಾ ಕಾರ್ಯಕ್ರಮದ ನಂತರ ಎಮ್.ಎನ್.ನಾಯ್ಕ ನಿರ್ದೇಶನದ ಮಾರುತಿ ಬಾಡಕರ ವಿರಚಿತ ‘ಗುಲಾಮ ಗಂಡ’ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.