ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದಿಸುವ ಮತ್ತು ಸರಕಾರದ ಮೇಲೆ ಹೆಚ್ಚಿನ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡ ಡಿಸೆಂಬರ್ 17 ರ ಅರಣ್ಯವಾಸಿಗಳನ್ನು ಉಳಿಸಿ ಯಶಸ್ವಿ ಜಾಥಾ ಮುಂದಿನ ದಿನಗಳ ಅರಣ್ಯವಾಸಿಗಳ ಹೋರಾಟದ ಕಿಚ್ಚನ್ನು ಹೆಚ್ಚಿಸಿಕೊಂಡಿದೆ.
ನಿರಂತರ 32 ವರ್ಷಗಳಿಂದ ಅರಣ್ಯವಾಸಿಗಳ ಅರಣ್ಯಭೂಮಿ ಹಕ್ಕಿಗಾಗಿ ಸಾಂಘಿಕ ಹೋರಾಟ ಮತ್ತು ಕಾನೂನಾತ್ಮಕ ಅರಣ್ಯವಾಸಿಗಳಿಗೆ ದೊರಕಬೇಕಾಗಿರುವ ಭೂಮಿ ಹಕ್ಕು ಮತ್ತು ಅರಣ್ಯ ಹಕ್ಕು ಕಾಯ್ದೆ ಜಾರಿ ಕುರಿತು ವ್ಯಾಪಕ ಜನಾಂದೋಲನ ಮತ್ತು ಜನಜಾಗೃತಿ ಮಾಡುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಡಿಸೆಂಬರ್ 17ರಂದು ಶಿರಸಿಯಲ್ಲಿ ಸಂಘಟಿಸಿದ ಅರಣ್ಯವಾಸಿಗಳ ಉಳಿಸಿ ಜಾಥಾವು ಮುಂದಿನ ವಿಭಿನ್ನವಾದ ಹೋರಾಟದ ದಿಕ್ಕಿಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.
ನಿರಂತರ 32 ವರ್ಷಗಳ ಹೋರಾಟಕ್ಕೆ ಅರಣ್ಯವಾಸಿಗಳಿಂದ ಸಾರ್ವತ್ರಿಕ ಹಣ ಸಂಗ್ರಹ ಮಾಡದೇ ಜಿಲ್ಲೆಯಲ್ಲಿ 32,227 ಅರಣ್ಯವಾಸಿಗಳ ಕುಟುಂಬಗಳನ್ನು ಹೋರಾಟಗಾರರ ವೇದಿಕೆಗೆ ಸದಸ್ಯ ಶುಲ್ಕವಿಲ್ಲದೇ ಸಾಂಘಿಕ ಮತ್ತು ಕಾನೂನಾತ್ಮಕ ಸಲಹೆ ಸೂಚನೆ ನೀಡುತ್ತಿದ್ದೇವೆ ಎಂಬ ಅಧ್ಯಕ್ಷ ರವೀಂದ್ರ ನಾಯ್ಕರವರ ಹೇಳಿಕೆ ಅರಣ್ಯವಾಸಿಗಳಿಂದ ಶ್ಲಾಘನೆಗೆ ಕಾರಣವಾಯಿತು.
ಬೆಳಗಾವಿ ಅಧಿವೇಶನದಲ್ಲಿ ಚರ್ಚೆ:
ಅರಣ್ಯವಾಸಿಗಳ ಮೂಲಭೂತ ವೇದಿಕೆಗಳಾದ ಸುಪ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರವಾಗಿ ತಿದ್ದುಪಡಿ ಪ್ರಮಾಣಪತ್ರ ಸಲ್ಲಿಸುವುದು, ಅಸಮರ್ಪಕ ಜಿ.ಪಿ.ಎಸ್. ಮೇಲ್ಮನವಿ ಅರ್ಜಿಗಳಿಗೆ ಸರಕಾರ ಸೂಕ್ತ ಆದೇಶ ನೀಡುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಗಂಭೀರವಾಗಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರುಗಳು ಚರ್ಚಿಸುವ ವಿಶ್ವಾಸ ಹೊರಹೊಮ್ಮಿದಲ್ಲದೆ ಶಾಶ್ವತ ಅರಣ್ಯ ವಾಸಿಗಳ ಸಮಸ್ಯೆ ಬಗೆಹರಿಯುವಿಕೆಗೆ ಜನಪ್ರತಿನಿಧಿಗಳ ಮೇಲೆ ಹೆಚ್ಚಿನ ಒತ್ತಡ ಅರಣ್ಯ ವಾಸಿಗಳನ್ನು ಉಳಿಸಿ ಜಾಥಾ ಪ್ರಭಾವ ಬೀರುವುದರಲ್ಲಿ ಸಂಶಯವಿಲ್ಲ.