ದಾಂಡೇಲಿ: ನಗರದ ಬಂಗೂರನಗರ ಪದವಿ ಕಾಲೇಜಿನಲ್ಲಿ 2022-23ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಶ್ರೀ.ರಂಗನಾಥ ಗ್ರಂಥಾಲಯದ ಸಭಾಭವನದಲ್ಲಿ ಜರುಗಿತು.
ವಿವಿಧ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಮಾನವ ಮನಸ್ಥಿತಿ ತರಬೇತುದಾರ ಮಹೇಶ ಮಾಸಾಳ, ಪ್ರತಿಯೊಂದು ವಿದ್ಯಾರ್ಥಿಗೂ ಕಾಲೇಜು ಜೀವನ ಭವಿಷ್ಯದ ಬದುಕಿನ ದಾರಿಯನ್ನು ತೋರಿಸುತ್ತದೆ. ಕಾಲೇಜು ಶಿಕ್ಷಣ ಅಂದರೇ ಅದೊಂದು ಶೋಕಿಗಾಗಿ ಇರುವ ಶಿಕ್ಷಣವಲ್ಲ. ಭವಿಷ್ಯದ ಉನ್ನತಿಗಾಗಿ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು, ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಲು ಇರುವ ಒಂದು ಮಾರ್ಗದರ್ಶನ ಕೇಂದ್ರ. ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ಮತ್ತು ಅವರವ ಆಸಕ್ತಿಗೆ ಅನುಗುಣವಾಗಿ ಪ್ರತಿಯೊಂದು ಕಾಲೇಜುಗಳಲ್ಲಿ ಎನ್.ಎಸ್.ಎಸ್, ಎನ್.ಸಿ.ಸಿ, ರೆಡ್ ಕ್ರಾಸ್, ರೆಡ್ ರಿಬ್ಬನ್, ಕ್ರೀಡಾ ಕ್ಲಬ್‌ಗಳನ್ನು ರಚಿಸಿಕೊಂಡು, ವಿದ್ಯಾರ್ಥಿಗಳನ್ನು ಆ ಮೂಲಕ ಭವಿಷ್ಯದ ಆಸ್ತಿಯನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಈ ಎಲ್ಲ ಚಟುವಟಿಕೆಗಳು ವಿದ್ಯಾರ್ಥಿಗಳ ಬಾಳು ಬೆಳಗಲು ಎನ್ನುವುದನ್ನು ವಿದ್ಯಾರ್ಥಿಗಳು ಅರಿತು ನಡೆದಾಗ ಭವಿಷ್ಯದಲ್ಲಿ ಉನ್ನತಿಯನ್ನು ಸಾಧಿಸಲು ಸಾಧ್ಯ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಆರ್.ಜಿ.ಹೆಗಡೆ ಮಾತನಾಡಿ, ಕಾಲೇಜಿನ ಎಲ್ಲ ಘಟಕಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವುದರಿ0ದಲೆ ಕಾಲೇಜು ತನ್ನ ಹೆಸರನ್ನು ಗಳಿಸಿಕೊಂಡಿದೆ. ಅದೇ ರೀತಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯಿಂದ ಆಯಾಯ ಚಟುವಟಿಕೆಗಳು ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯ. ಈ ವರ್ಷ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಚಟುವಟಿಕೆಗಳು ನಡೆದು ರಾಜ್ಯ, ರಾಷ್ಟ್ರಮಟ್ಟದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮಿಂಚುವುದರ ಮೂಲಕ ಕಾಲೇಜಿಗೆ ಮತ್ತಷ್ಟು ಹಿರಿಮೆ ಗರಿಮೆಯನ್ನು ತಂದುಕೊಡಬೇಕೆoದು ಕರೆ ನೀಡಿದರು.
ಪಿ.ಎಚ್.ಡಿ ಪದವಿ ಪಡೆದ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ಪರ್ವಿನ್ ಶೇಖ್ ಮತ್ತು ಅಮ್ರೀನ್ ಕಿತ್ತೂರು ಅವರನ್ನು ಮತ್ತು ಕ್ರೀಡೆಯಲ್ಲಿ ಅನುಪಮ ಸಾಧನೆಗೈದ ಕಾಲೇಜಿನ ದ್ವಿತೀಯ ವಾಣಿಜ್ಯ ಪದವಿ ವಿದ್ಯಾರ್ಥಿನಿ ಅಶ್ವಿನಿ ಪವಾರ್ ಅವರನ್ನು ಸನ್ಮಾನಿಸಲಾಯಿತು.
ವೈಷ್ಣವಿ ಹಾಗೂ ಸಂಗಡಿಗರಿoದ ಪ್ರಾರ್ಥನೆ, ನಿಶಾ ಬೆಳ್ಳಿಗಟ್ಟಿ ಹಾಗೂ ತಂಡದವರು ಎನ್.ಎಸ್.ಎಸ್ ಗೀತೆ ಹಾಡಿದರು. ಡಾ.ಬಿ.ಎಲ್.ಗುಂಡೂರ್ ಅವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಎಸ್.ಎಸ್.ಹಿರೇಮಠ ವಂದಿಸಿದರು. ವೀಣಾ ಪಾಟೀಲ್ ಮತ್ತು ಎನ್.ಯು.ಸಹನಾ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ.ಬಿ.ಎಲ್.ಗುಂಡೂರ, ಕ್ರೀಡಾ ವಿಭಾಗದ ಸಂಯೋಜಕರಾದ ವಿನಯ್ ಎಸ್., ರೆಡ್ ಕ್ರಾಸ್ ಹಾಗೂ ರೆಡ್ ರಿಬ್ಬನ್ ಕ್ಲಬ್ ವಿಭಾಗದ ಸಂಯೋಜಕ ಎಸ್.ಎಸ್.ಹಿರೇಮಠ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಾದ ಅನುಷಾ ಕೆ.ಉಮದಿ, ಫುರ್ಕಾನ್ ಎ.ಎಸ್.ಝುಂಜವಾಡ, ಶ್ರೀಧರ್, ಪ್ರಗತಿ ಮೊದಲಾದವರು ಉಪಸ್ಥಿತರಿದ್ದರು.