ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆವರಣದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಆಶ್ರಯದಡಿ, ಕಾಗದ ಕಾರ್ಖಾನೆಯ ಸಹಭಾಗಿತ್ವದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಎಸೈ ನಾರಾಯಣ ರಾಥೋಡ, ಈ ದೇಶದ ಕಾನೂನನ್ನು ಗೌರವಿಸುವವನು ಎಂದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲಾರ. ಈ ಹಿನ್ನಲೆಯಲ್ಲಿ ನಮ್ಮ ದೇಶದ ಕಾನೂನಿನ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದು ಕರೆ ನೀಡಿದರು. ಇಂದು ಮೊಬೈಲ್‌ಗಳ ಮೂಲಕ ಆಗುತ್ತಿರುವ ಅಪರಾಧ ಚಟುವಟಿಕೆಗಳ ಬಗ್ಗೆ ವಿವರಿಸಿದ ಅವರು ವಿವಿಧ ಆಮಿಷಗಳನ್ನು ಒಡ್ಡಿ, ಓಟಿಪಿಗಳನ್ನು ಪಡೆದು ಮೋಸದಿಂದ ಹಣ ಲಪಟಾಯಿಸುವ ತಂಡಗಳು ಹುಟ್ಟಿಕೊಂಡಿದ್ದು, ಇದರಿಂದ ಅನೇಕರು ಹಣವನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕೆಂದರು.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವಿಜಯ ಮಹಾಂತೇಶ್ ಅವರು ಮಾತನಾಡಿ ನಾವು ಆದರ್ಶ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಾಗ ಅಪರಾಧಗಳಂತಹ ಚಟುವಟಿಕೆಗಳೆ ನಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಾನೂನಿನ ಪರಿಪಾಲನೆ ಅತೀ ಅವಶ್ಯಕ ಎಂದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಭದ್ರತಾ ವಿಭಾಗದ ಅಧಿಕಾರಿಗಳಾದ ಕುಶಾಲಪ್ಪ, ಎಸ್.ಜಿ.ಪಾಟೀಲ್, ಪೊಲೀಸ್ ಸಿಬ್ಬಂದಿಗಳಾದ ಗುಂಡು ಖಂಡೇಕರ್, ಚಂದ್ರಿಕಾ ನಾಯ್ಕ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಉಪಸ್ಥಿತರಿದ್ದರು.