ಜೊಯಿಡಾ: ತಾಲ್ಲೂಕಿನ ಶ್ರೀ.ಕ್ಷೇತ್ರ ಉಳವಿಯಲ್ಲಿ ಡಿ.17ರಿಂದ 18ರವರೆಗೆ ಒಟ್ಟು ಎರಡು ದಿನಗಳವರೆಗೆ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೆ ಸರ್ವ ಸಿದ್ಧತೆಗಳನ್ನು ನಡೆಸಲಾಗಿದೆ. ಶುಕ್ರವಾರ ಶ್ರೀಕ್ಷೇತ್ರ ಉಳವಿಯನ್ನು ನುಡಿ ಜಾತ್ರೆಗಾಗಿ ಶೃಂಗಾರಗೊಳಿಸುವ ಕಾರ್ಯ ಭರದಿಂದ ನಡೆಯಿತು.
ಸಮ್ಮೇಳನ ನಡೆಯುವ ಹಾಗೂ ಸುತ್ತಮುತ್ತಲು ಸ್ವಚ್ಚತಾ ಕಾರ್ಯ ಸೇರಿದಂತೆ, ಪೆಂಡಲ್ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಕನ್ನಡದ ಮನಸ್ಸುಗಳನ್ನು ಶ್ರೀಕ್ಷೇತ್ರ ಉಳವಿಯೂ ಕೈ ಬೀಸಿ ಕರೆಯಲು ಹೊರಟಂತಿದೆ. ಸ್ಥಳೀಯ ಗ್ರಾಮಸ್ಥರು, ಸಾರ್ವಜನಿಕರು ಊರ ಹಬ್ಬದ ಸಂಭ್ರಮದoತೆ ಸ್ವಚ್ಚತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಕಟ್ಟುವ ಕಾರ್ಯದಲ್ಲಿ ನಿರತರಾಗಿ ಗಮನ ಸೆಳೆದಿದ್ದಾರೆ.
ತಾಲ್ಲೂಕಾಡಳಿತ, ಶ್ರೀಕ್ಷೇತ್ರ ಉಳವಿ ದೇವಸ್ಥಾನ ಟ್ರಸ್ಟ್, ಉಳವಿ ಗ್ರಾಮ ಪಂಚಾಯತಿ, ವಿವಿಧ ಸಂಘ- ಸಂಸ್ಥೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆಯವರ ನೇತೃತ್ವದ ಮೊದಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದ್ದು, ಈ ಸಮ್ಮೇಳನವನ್ನು ಐತಿಹಾಸಿಕವನ್ನಾಗಿಲು ಕಳೆದ ಒಂದು ತಿಂಗಳಿನಿoದ ನಿರಂತರವಾಗಿ ತಂಡವಾಗಿ ಶ್ರಮಿಸುತ್ತಿದ್ದಾರೆ.