ಕುಮಟಾ: ತಾಲೂಕಿನ ಐತಿಹಾಸಿಕ ಮಿರ್ಜಾನ್ ಕೋಟೆ ಬಳಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವ ಮೂಲಕ ಮಿರ್ಜಾನ್ ಗ್ರಾ.ಪಂ ಅಧ್ಯಕ್ಷ ಪರಮೇಶ್ವರ ಪಟಗಾರ ಅವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ತಾಲೂಕಿನ ಐತಿಹಾಸಿಕ ಮಿರ್ಜಾನ್ ಕೋಟೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಕೋಟೆ ಬಳಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಹೊಂಡ,ತಗ್ಗು ಪ್ರದೇಶದಿಂದ ಕೂಡಿರುವ ಸ್ಥಳದಲ್ಲೆ ಪ್ರವಾಸಿಗರು ತಮ್ಮ ವಾಹನ ನಿಲುಗಡೆ ಮಾಡಬೇಕಾದ ದುಸ್ಥಿತಿ ಎದುರಾಗಿತ್ತು. ಈ ಬಗ್ಗೆ ಕೆಲ ಪ್ರವಾಸಿಗರು ಸ್ಥಳೀಯರ ಬಳಿ ದೂರಿಕೊಂಡಿರುವುದು ಇದೆ. ಪಾರ್ಕಿಂಗ್ ವ್ಯವಸ್ಥೆಗಾಗಿ ಸ್ಥಳೀಯರ ಖಾಸಗಿ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಮಿರ್ಜಾನ್ ಗ್ರಾಪಂ ಅಧ್ಯಕ್ಷ ಪರಮೇಶ್ವರ ಪಟಗಾರ ಅವರು ತಮ್ಮ ಸ್ವಂತ ಖರ್ಚಿನಿಂದ 20 ಲೋಡ್ ಮಣ್ಣು ಭರಾವ್ ಮಾಡಿ, ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಗಮನಕ್ಕೆ ಬಂದಾಗ ಜಿಪಂ ಸಿಇಒ, ತಾ.ಪಂ. ಇಒ ಅವರ ಗಮನಕ್ಕೆ ತಂದರೆ, ನಮ್ಮಲ್ಲಿ ಅನುದಾನವಿಲ್ಲ. ಪಂಚಾಯತ ಗುತ್ತಿಗೆದಾರರಿಂದ ಸಂಪನ್ಮೂಲ ಕ್ರೋಢೀಕರಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಗುತ್ತಿಗೆದಾರರು ಸಕಾರಾತ್ಮಕಾಗಿ ಸ್ಪಂದಿಸಿಲ್ಲ. ಕೊನೆಗೆ ನಮ್ಮೂರಿನ ಕೋಟೆಯೆಂಬ ಅಭಿಮಾನದಿಂದ ನನ್ನ ಸ್ವಂತ ಹಣದಿಂದ 20 ಲೋಡ ಮಣ್ಣು ಭರಾವು ಮಾಡಿ ಜೆ.ಸಿ.ಬಿಯಿಂದ ಸಮತಟ್ಟುಗೊಳಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದೇನೆ ಎಂದರು.