ಅಂಕೋಲಾ: ಮೊಬೈಲ್‌ಗಳಿಂದ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ಕುಂಠಿತಗೊಳ್ಳುತ್ತಿದೆ. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ವ್ಯಾವಹಾರಿಕ ಜ್ಞಾನ ಅತ್ಯವಶ್ಯಕ ಎಂದು ಪತ್ರಕರ್ತ ವಾಸುದೇವ ಗುನಗಾ ಹೇಳಿದರು.
ಅವರು ತಾಲೂಕಿನ ಆದರ್ಶ ಪ್ರೌಢಶಾಲೆಯಲ್ಲಿ ಆಯೋಜಿಸಲ್ಪಟ್ಟ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ದೈನಂದಿನ ಜೀವನದಲ್ಲಿ ವ್ಯಾವಹಾರಿಕ ಜ್ಞಾನ ಅತ್ಯಗತ್ಯ. ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳ ಕೌಶಲ್ಯವನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆ ಸಿಗುವಂತೆ ಮಾಡಬೇಕು ಎಂದರು.
ಬೊಬ್ರುವಾಡ ಗ್ರಾ.ಪಂ ಅಧ್ಯಕ್ಷೆ ಸೀಮಾ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಅತ್ಯವಶ್ಯಕ. ಪ್ರಸಕ್ತ ದಿನಗಳಲ್ಲಿ ಮಕ್ಕಳು ಮೊಬೈಲ್ ಗಳಿಂದ ದಾರಿ ತಪ್ಪುತ್ತಿದ್ದಾರೆ. ಪಾಲಕರು ಮಕ್ಕಳ ಬಗ್ಗೆ ಆಗಾಗ ಗಮನಹರಿಸುತ್ತಿರಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಆದರ್ಶ ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಿತ್ಯಾನಂದ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ ಎಂ.ನಾಯ್ಕ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಶಿಕ್ಷಕ ಮಧುಕೇಶ್ವರ ನಾಯ್ಕ, ಭಾರತಿ ನಾಯ್ಕ, ದೇವಯಾನಿ ನಾಯಕ, ರಜನಿ ನಾಯ್ಕ, ನವೀನ್ ನಾಯ್ಕ, ಅರುಣಾ ನಾಯ್ಕ ಮುಂತಾದವರು ಇದ್ದರು.
ಅಂಗಡಿಯಲ್ಲಿ ಭರ್ಜರಿ ವ್ಯಾಪಾರ
ಮಕ್ಕಳ ಸಂತೆಯಲ್ಲಿ 25ಕ್ಕೂ ಹೆಚ್ಚು ಅಂಗಡಿಗಳನ್ನು ತೆರೆದಿದ್ದ ಮಕ್ಕಳು ವಿವಿಧ ಖಾದ್ಯಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದ್ದರು. ಕರಾವಳಿ ಬಾಗದ ಒಣಮೀನು, ಸ್ಥಳೀಯವಾಗಿ ಬೆಳೆದ ತರಕಾರಿ ಹಾಗೂ ಸೊಪ್ಪುಗಳು, ತಂಪುಪಾನಿಯಗಳು, ತೆಂಗಿನಕಾಯಿ, ಹಣ್ಣಿನ ಸಲಾಡ್, ಗ್ರಾಮೀಣ ಭಾಗದ ಕೋಳಿ ಸಾರು, ರೊಟ್ಟಿಗಳ ಅಂಗಡಿಗಳಲ್ಲಿ ಮಾರಾಟ ಬಲು ಜೋರಾಗಿತ್ತು. ವ್ಯಾಪಾರ ಮಾಡುತ್ತ ವಿದ್ಯಾರ್ಥಿಗಳ ಸಂತಸದೊoದಿಗೆ ಸಂತೆಯನ್ನು ಪೂರ್ಣಗೊಳಿಸಿದರು.