ಅಂಕೋಲಾ: ಪ್ರಚಲಿತ ಹೆಚ್ಚುವರಿ ಶಿಕ್ಷಕರ ವರ್ಗಾವಣಾ ಮಾರ್ಗಸೂಚಿಯನ್ವಯ ಶಿಕ್ಷಕರಿಗಾಗುತ್ತಿರುವ ತೊಂದರೆಗೆ ಸಂಬಂಧಿಸಿ ಮರುಪರಿಶೀಲಿಸಿ ಕ್ರಮವಹಿಸಬೇಕೆಂದು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ವರ್ಗಾವಣೆಯ ಭಾದಿತ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಸ್ತುತ ಹೆಚ್ಚುವರಿಗೆ ಸಂಬಂಧಿಸಿ ಸುಮಾರು ಒಂದು ವರ್ಷದ ಹಿಂದಿನ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿರುವುದು ಪ್ರಸ್ತುತ ಅಂಕಿ- ಅಂಶಕ್ಕೆ ವಿರುದ್ಧವಾಗಿರುವುದರಿಂದ ವೈಜ್ಞಾನಿಕ ಕ್ರಮವಾಗಿರುವುದಿಲ್ಲ. ಈಗ ಹೆಚ್ಚುವರಿಗೊಳಿಸುವುದರಿಂದ ಇಂದಿಗೆ ಶಿಕ್ಷಕರ ಕೊರತೆಯಾಗುವ ಅನೇಕ ಶಾಲೆಗಳಿವೆ. ಸದ್ರಿ ವರ್ಗಾವಣೆಯನ್ನು ಶೈಕ್ಷಣಿಕ ವರ್ಷದ ಮೂರನೇಯ ಹಂತದಲ್ಲಿ ನಡೆಸಲು ಮುಂದಾಗಿರುವುದು ಈ ಶೈಕ್ಷಣಿಕ ವರ್ಷವು ಅಂತ್ಯಗೊಳ್ಳಲು ಇನ್ನು ಕೇವಲ 4 ತಿಂಗಳು ಮಾತ್ರ ಬಾಕಿಯಿದ್ದು, ಬೋಧನಾ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದ ಹೊತ್ತಿನಲ್ಲಿ ಶಿಕ್ಷಕರನ್ನು ವರ್ಗಾಯಿಸಿದಲ್ಲಿ ವಿದ್ಯಾರ್ಥಿಗಳ ಕಲಿಕೆ ಹಾಗೂ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಶೈಕ್ಷಣಿಕ ವರ್ಷಾಂತ್ಯದಲ್ಲಿ ವಯೋನಿವೃತ್ತಿಗೊಳ್ಳುವ ಶಿಕ್ಷಕರು ಖಾಲಿಯಾಗುವ ಸಂಭವವಿರುವಾಗ ಅದಕ್ಕೂ ಮುನ್ನ ಶೈಕ್ಷಣಿಕ ವರ್ಷದ ಮಧ್ಯಂತರದಲ್ಲಿ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸುವುದರಿಂದ ಸ್ಥಳ ಆಯ್ಕೆಗೆ ಅಡಚಣೆಯಾಗಿ ಅನಾನುಕೂಲ ಸ್ಥಳಕ್ಕೆ ಬಲವಂತವಾಗಿ ನಿಯುಕ್ತಿಗೊಳ್ಳುವ ಸಂಧಿಗ್ಧ ಸ್ಥಿತಿಯು ನಿರ್ಮಾಣವಾಗಲಿದ್ದು, ಶಿಕ್ಷಕರು ತೊಂದರೆ ಎದುರಿಸುವ ಪರಿಸ್ಥಿತಿಯು ಉದ್ಭವವಾಗಲಿದೆ. ಕೇವಲ ಆರೆಂಟು ತಿಂಗಳ ಹಿಂದಷ್ಟೇ ವರ್ಗಾವಣೆಯಾಗಿ ಸ್ಥಳ ನಿಯುಕ್ತಿಗೊಂಡಿರುವವರು ಹೆಚ್ಚುವರಿಯಾದ ಅನೇಕ ಉದಾಹರಣೆಗಳಿದ್ದು, ಸ್ವಾಭಾವಿಕ ನ್ಯಾಯ ತತ್ವಕ್ಕೆ ಈ ವರ್ಗಾವಣೆ ವಿರುದ್ಧವಾಗಿದೆ. ಸದ್ರಿ ಹೆಚ್ಚುವರಿ ವರ್ಗಾವಣೆಯನ್ನು 2023ರ ಅಕ್ಟೋಬರ್ ರಜಾ ಅವಧಿಗೆ ಮುಂದೂಡಿ, 2023ರ ಜುಲೈ 31ರ ದಿನಾಂಕದoದು ಇರುವ ವಿದ್ಯಾರ್ಥಿಗಳ ಅಂಕಿ ಅಂಶಗಳಿಗೆ ಅನುಗುಣವಾಗಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗಿ ಅವರು ಸಲ್ಲಿಸಿದ ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀನಿವಾಸ ನಾಯಕ, ವಿ.ಪಿ. ನಾಯ್ಕ, ಆರ್.ಪಿ. ಗೌಡ, ಪ್ರಶಾಂತ ನಾಯಕ, ದೇವಾಂಗಿನಿ ನಾಯಕ, ಪ್ರವೀಣ ತಳೇಕರ, ದಯಾನಂದ ವಿ. ನಾಯ್ಕ, ರಾಜೇಶ್ವರಿ ಗಣಪತಿ ಹೆಗಡೆ, ವತ್ಸಲಾ ನಾಯಕ, ವಿದ್ಯಾ ಪಡುಕೋಣೆ, ರಾಜೇಶ ಜಿ.ಗುರವ, ನಾಗವೇಣಿ ನಾಯಕ, ಜ್ಯೋತಿ ನಾಯಕ, ಸಾವಿತ್ರಿ ನಾಯ್ಕ, ರಾಜೇಶ ಶೆಟ್ಟಿ ಇನ್ನಿತರು ಉಪಸ್ಥಿತರಿದ್ದರು.