ಸಿದ್ದಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಡಿ ಸುಮಾರು 10 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಮಕ್ಕಳ ಖುಷಿಗೆ ಪಾತ್ರವಾಗಿದೆ.
ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ್‌ನ ಹೆಮ್ಮನಬೈಲ್ ಗ್ರಾಮದಲ್ಲಿ ಮಳೆಯಿಂದಾಗಿ ಅಂಗನವಾಡಿ ಕಟ್ಟಡ ಕುಸಿದು ಮಕ್ಕಳಿಗೆ ಕುಳಿತುಕೊಳ್ಳಲು ಕಷ್ಟವಾಗಿತ್ತು. ಆದರೆ ಇದೀಗ ಹೊಸ ಕಟ್ಟಡ ನಿರ್ಮಾಣದಿಂದಾಗಿ ಇಲ್ಲಿನ ಚಿಣ್ಣರು ನಿರ್ಭಯವಾಗಿ ಅಂಗನವಾಡಿಯತ್ತ ಹೆಜ್ಜೆಯಿಡುವಂತಾಗಿದೆ.
ಇನ್ನು ಈ ಮಕ್ಕಳಿಗೆ ವ್ಯವಸ್ಥಿತ ಕಟ್ಟಡದಲ್ಲಿ ಅಚ್ಚುಕಟ್ಟಾದ ಅಡುಗೆಕೋಣೆ, ಸ್ಟೋರ್ ರೂಮ್, ಶೌಚಾಲಯ, ಕುಳಿತುಕೊಳ್ಳಲು ವಿಶಾಲ ಕೋಣೆ ಕೂಡಾ ಇದ್ದು ಸುಸಜ್ಜಿತ ಕೇಂದ್ರವಾಗಿ ಮಾದರಿಯಾದಂತಿದೆ. ಅಂಗನವಾಡಿ ಕಾರ್ಯಕರ್ತೆ ಉಷಾ ನಾಯ್ಕ ಹೇಳುವಂತೆ 41 ಮನೆಗಳನ್ನು ಹೊಂದಿರುವ ನಮ್ಮ ಗ್ರಾಮದಲ್ಲಿ ಪ್ರತಿ ವರ್ಷವೂ 15-17 ಮಕ್ಕಳು ಅಂಗನವಾಡಿಗೆ ಬರುತ್ತಾರೆ. ಕಳೆದೆರಡು ವರ್ಷಗಳ ಹಿಂದೆ ಕಟ್ಟಡ ಶಿಥಿಲಗೊಂಡಿದ್ದ ಕಾರಣ ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಭಯಪಡುವಂತಾಗಿತ್ತು. ಆದರೀಗ ಗ್ರಾಮ ಪಂಚಾಯತ್ ಸಹಕಾರದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು, ತುಂಬಾ ಖುಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮಂಜಪ್ಪ, ಅಂಗನವಾಡಿ ಅಡುಗೆ ಸಹಾಯಕಿ ಶೀಲಾ ನಾಯ್ಕ, ಬಿಎಫ್‌ಟಿ ಶ್ರೀಧರ ಇದ್ದರು.