ಸಿದ್ದಾಪುರ: ತಾರಖಂಡ ಸೀತಾರಾಮ ಹೆಗಡೆಯವರು ಹಲವಾರು ಅಡೆತಡೆಗಳ ಮಧ್ಯದಲ್ಲಿಯೆ ಬದುಕಿನ ಅಪ್ರತಿಮ ಪ್ರೀತಿಯಿಂದಾಗಿಯೇ ಸಮಾಜಕ್ಕೆ ಆದರ್ಶಪ್ರಾಯವಾಗಿ ಬದುಕಿದವರು ಎಂದು ಕವಿ ವೆಂಕಟರಮಣ ಹೆಗಡೆ ತಾರಖಂಡ ಹೇಳಿದರು.
ಅವರು ತಾಲೂಕಿನ ಕಲಾಭಾಸ್ಕರ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಇಟಗಿ ಯಕ್ಷೋತ್ಸವ-೨೦೨೨ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವ್ಯಕ್ತಿಯೊಬ್ಬ ತನ್ನ ಪ್ರಭಾವದಿಂದಲೇ ಸುತ್ತಮುತ್ತಲಿನ ಜನಜೀವನವನ್ನು ಬದಲಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಹಾಗೆಯೇ ಯಕ್ಷಗಾನ ಅರ್ಥಗಾರಿಕೆ, ಪ್ರಸಂಗರಚನೆ, ವಿದ್ಯಾರ್ಥಿಗಳಿಗೆ ವಿದ್ಯಾದಾನ, ಧಾರ್ಮಿಕ ಮುಖಂಡತ್ವ ಹಾಗು ಸ್ವಾತಂತ್ರ್ಯ ಹೋರಾಟ ಮುಂತಾದ ಬೇರೆ ಬೇರೆ ನೆಲೆಗಳಲ್ಲಿ ಗಟ್ಟಿ ಹೆಜ್ಜೆಯನ್ನು ಮೂಡಿಸುವುದರ ಮೂಲಕ ಸೀತಾರಾಮ ಹೆಗಡೆಯವರು ತಮ್ಮ ಶಾಶ್ವತವಾದ ಛಾಪನ್ನು ಒತ್ತಿ ಹೋಗಿದ್ದಾರೆ. ಇಂತಹ ಉದ್ದಾಮರನ್ನು ನೆನಪಿಸುವುದು ಅರ್ಥಪೂರ್ಣ ಕಾರ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಇಟಗಿ ಮಹಾಬಲೇಶ್ವರ ಭಟ್ಟ ಸ್ವಾಗತಿಸಿದರು. ನಂತರ ತಾರಖಂಡ ಸೀತಾರಾಮ ಹೆಗಡೆ ರಚಿಸಿದ ಭೀಷ್ಮ ಪ್ರಪಂಚದೊಳಗಣ ‘ಪಾಂಡು ಅವಸಾನ’ ಎಂಬ ಯಕ್ಷಗಾನ ಪ್ರಸಂಗ ನಡೆಯಿತು.