ಅಂಕೋಲಾ: ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದ ಅಂತರ್ಜಲ ಕುಸಿಯುತ್ತಲಿದೆ. ಆದುದರಿಂದ ಮುಂಬರುವ ದಿನಗಳಲ್ಲಿ ನೀರಿನ ಬಳಕೆ ಮಿತವಾಗಿರಬೇಕು ಎಂದು ಅಚವೆ ಗ್ರಾಮ ಪಂಚಾಯತ ಉಪಾಧ್ಯಕ್ಷ ಬಾಲಚಂದ್ರ ಶೆಟ್ಟಿ ನುಡಿದರು.
ಅವರು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ಬಾಳೆಗುಳಿ ಸಂಗಮ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಹಿಲ್ಲೂರಿನಲ್ಲಿ ಏರ್ಪಡಿಸಲಾದ ಮಳೆ ನೀರು ಕೊಯಿಲು ಹಾಗೂ ಜಲ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಹಿಂದೂ ಸಂಸ್ಕೃತಿಯಲ್ಲಿ ನೀರಿಗೆ ಅತ್ಯಂತ ಮಹತ್ವವಿದೆ. ಅತಿಥಿಗಳ ಉಪಚಾರವಲ್ಲದೇ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ನೀರು ಅವಶ್ಯಕ ಆದುದರಿಂದ ಇದರ ಸಂರಕ್ಷಣೆಗೆ ಅನಿವಾರ್ಯ ಎಂದು ಸಹ ಅವರು ನುಡಿದರು.
ದಿಶಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯ ನಾರಾಯಣ ರಾಯ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಗಮ ಸೇವಾ ಸಂಸ್ಥೆಯ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಗಜಾನನ ಗಾವಡಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕೌಟುಂಬಿಕ ಸಲಹಾ ಕೇಂದ್ರ ಅಂಕೋಲಾದ ತಿಮ್ಮಣ್ಣ ಭಟ್ ವಂದಿಸಿದರು.