ಅಂಕೋಲಾ: ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಮೃದು ಹೃದಯದ, ವಿಶಾಲ ಮನೋಭಾವದ ಸಾಹಿತಿ ಶಾಂತಾರಾಮ ನಾಯಕ ಹಿಚಕಡರಿಗೆ 22ನೇ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಒಲಿದು ಬಂದಿರುವುದು ಅರ್ಹತೆಗೆ ಸಂದ ಗೌರವವಾಗಿದೆಯೆಂದು ಲಾಯನ್ಸ್ 317ಬಿಯ ಮಾಜಿ ಗವರ್ನರ್ ಗಣಪತಿ ನಾಯಕ ಹೇಳಿದರು.
ಉಳವಿಯಲ್ಲಿ ಜರುಗುವ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಶಾಂತಾರಾಮ ನಾಯಕರನ್ನು ಅವರ ಮನೆಯಂಗಳದಲ್ಲಿ ಜರುಗಿದ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಮಾತನಾಡುತ್ತಿದ್ದರು. ನಮ್ಮೆಲ್ಲರ ಪ್ರೀತಿಗೆ ಪಾತ್ರನಾದ ಶಾಂತಣ್ಣ ಶಿಕ್ಷಕ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆಂದರು. ಅಂಕೋಲೆಯ ಲಾಯನ್ಸ್ ಕರಾವಳಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 13 ಕ್ಲಬ್‌ಗಳನ್ನು ಪ್ರತಿನಿಧಿಸುವ ಲಾಯನ್ಸ್ ಕ್ಯಾನರಾ ಫೋರಂ ಈ ಕಾರ್ಯಕ್ರಮ ಜಂಟಿಯಾಗಿ ಏರ್ಪಡಿಸಿದ್ದವು.
ಲಾಯನ್ಸ್ ಹಿರಿಯ ಸದಸ್ಯ ಮಹಾಂತೇಶ ರೇವಡಿ ಮಾತನಾಡಿ, ಶಾಂತಾರಾಮ ನಾಯಕರು ಲಾಯನ್ಸ್ ಅಧ್ಯಕ್ಷ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ನೆನಪಿಸುತ್ತಾ ಶಾಂತಾರಾಮ ನಾಯಕ ಒಳ್ಳೆತನದ ಪ್ರತೀಕವಾಗಿದ್ದು ನಾಡಿನ ಕಣ್ಣಾಗಿದ್ದಾರೆಂದರು. ಲಾಯನ್ ಉಡುಪಿ ಸರ್ ಸಾಂದಾರ್ಭಿಕವಾಗಿ ಮಾತನಾಡುತ್ತಾ ಶಾಂತಾರಾಮ ಸರ್ ಸುದೀರ್ಘ ಕಳಂಕ ರಹಿತ ಸಾರ್ವಜನಿಕ ಬದುಕಿನಲ್ಲಿ ಸಮಾಜದಿಂದ ಪಡೆದುದಕ್ಕಿಂತ ನೀಡಿದ್ದೆ ಹೆಚ್ಚೆಂದರು. ಅವರು ಅಂಕೋಲೆಯ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ದಾಖಲಿಸಿದ್ದು ಮರೆಯಲಾಗದ ಸಂಗತಿ ಎಂದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಶಾಂತಾರಾಮ ನಾಯಕ, ಲಯನ್ಸ್ನಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆ ತನ್ನ ಮನೆಬಾಗಿಲಿಗೆ ಬಂದು ಸನ್ಮಾನಿಸಿದ್ದು ನನಗೆ ಸಂತಸ ತಂದಿದೆ ಎಂದರು. ಲಾಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಸೇವಾ ಕಾರ್ಯಗಳನ್ನು ಮುಕ್ತ ಕಂಠದಿಂದ ಪ್ರಶಂಸಿದರು.
ಲಯನ್ಸಿನ ಕಾರ್ಯದರ್ಶಿ ಜಿ.ಆರ್.ತಾಂಡೇಲ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು. ಖಜಾಂಚಿ ಹಸನ್ ಶೇಖ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರಾದ ಕೇಶವಾನಂದ ನಾಯಕ, ದುರ್ಗಾನಂದ ದೇಸಾಯಿ, ಗಣಪತಿ ನಾಯಕ ಶೀಳ್ಯಾ, ಡಾ.ಕರುಣಾಕರ ನಾಯ್ಕ ಉಪಸ್ಥಿತರಿದ್ದರು.