ಕಾರವಾರ: ವಿದ್ಯಾರ್ಥಿ ಜೀವನದಲ್ಲಿಯೇ ಒಂದು ನಿರ್ದಿಷ್ಟಗುರಿ ಹೊಂದಿರಬೇಕು. ನಮಗೆ ಇಷ್ಟವಾದ ವಿಷಯದಲ್ಲಿಯೇ ಶ್ರದ್ಧೆಯಿಂದ ಕಷ್ಟಪಟ್ಟು ಅಧ್ಯಯನ ಮಾಡಬೇಕು. ಪತ್ರಿಕೆಗಳನ್ನು ಪ್ರತಿನಿತ್ಯ ತಪ್ಪದೇ ಓದಬೇಕು. ಮೊಬೈಲ್‌ನಿಂದ ದೂರವಿರಬೇಕು ಎಂದು ಅಸಿಸ್ಟಂಟ್ ಕಮಿಷನರ್, ಬಾಲಮಂದಿರ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿ ಅಪೇಕ್ಷಾ ಪವಾರ್ ನುಡಿದರು.
ಅವರು ನಗರದ ಹಿಂದೂ ಪ್ರೌಢಶಾಲೆಯ 125ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ‘ಕರಿಯರ್ಸ್ & ಯು’ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತಾಧಿಕಾರಿ ಜಿ.ಪಿ.ಕಾಮತ್, ಕಿರಿಯ ವಯಸ್ಸಿನಲ್ಲಿಯೇ ರಾಜ್ಯ/ ರಾಷ್ಟ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಅಪೇಕ್ಷಾಳಂತಹ ಉಜ್ವಲ ತಾರೆಯೊಂದು ಇಂದು ಪ್ರತಿಷ್ಠಿತ ಕೆಎಎಸ್ ಹುದ್ದೆಯಲ್ಲಿರುವುದು ನಮಗೆ ಸಂತಸ ನೀಡಿದೆ ಎಂದರು.
ಹಿಂದೂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರುಣ ರಾಣೆ ಸ್ವಾಗತ ಕೋರಿದರು. ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ವಂದನಾರ್ಪಣೆ ಸಲ್ಲಿಸಿದರು. ಶಿಕ್ಷಕ ರತ್ನಾಕರ ಎಸ್.ಮಡಿವಾಳ ಮಾತನಾಡಿದರು. ಸುಮತಿ ದಾಮ್ಲೆ ಪ್ರೌಢಶಾಲೆಯ ಶಿಕ್ಷಕ ಸಂತೋಷ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯಾಧ್ಯಾಪಕಿ ಗಿರಿಜಾ ಬಂಟ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಪೇಕ್ಷಾ ಮತ್ತು ಅವರ ತಾಯಿ ಶೀಲಾ ಎಸ್.ಪವಾರ್‌ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದರು.