ಹೊನ್ನಾವರ: ದೇವರು ನಮ್ಮ ಜೊತೆ ಇರುವಾಗ ಯಾವುದೇ ಕಷ್ಟ ಕಾರ್ಪಣ್ಯ ಇರಲಿ ಯಾವುದೇ ಪರಿಸ್ಥಿತಿ ಇರಲಿ ನಾವು ಎಲ್ಲವನ್ನು ಎದುರಿಸಿ ಶಾಂತಿಯಿಂದ ಬಾಳುತ್ತೇವೆ. ದೇವರು ಪ್ರೀತಿಯ ಸಂಕೇತವಾಗಿದ್ದಾನೆ ಎಂದು ಕ್ರೈಸ್ತ ಧರ್ಮಗುರುಗಳಾದ ಫಾದರ್ ಥಾಮಸ್ ಫರ್ನಾಂಡಿಸ್ ನುಡಿದರು.
ಜೀವನ್ ಜ್ಯೋತಿ ಸಭಾಭವನದಲ್ಲಿ ಕ್ಯಾಥೋಲಿಕ್ ಅಸೋಶಿಯೋಸನ್ ಡೈಸಿಸ್ ಆಪ್ ಕಾರವಾರ ಇವರ ಆಶ್ರಯದಲ್ಲಿ ರವಿವಾರ ಯಶಸ್ವಿಯಾಗಿ ಜರುಗಿದ ಡಿನರಿ ಮಟ್ಟದ ಕ್ರಿಸ್ಮಸ್ ಕ್ಯಾರಲ್ ಸಿಂಗಿಂಗ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರಿಸ್ಮಸ್ ಎನ್ನುವುದು ಆಡಂಭರದ ಹಬ್ಬವಲ್ಲ. ಪ್ರೀತಿ ಹಂಚುವ ಹಬ್ಬ. ಇದು ಯಾವುದೇ ಜಾತಿ, ಧರ್ಮ, ರಾಜ್ಯ, ದೇಶ ಎನ್ನುವ ಸಿಮೀತ ವ್ಯಾಪ್ತಿಯಲ್ಲ. ಇವೆಲ್ಲವನ್ನು ಮೀರಿದ್ದಾಗಿದೆ. ಕ್ರಿಸ್ಮಸ್ ಎಂದರೆ ಅಶಾಂತಿಯನ್ನು ದೂರಮಾಡಿ ಶಾಂತಿಯನ್ನು ನೀಡುವುದಾಗಿದೆ. ಮನುಷ್ಯನ ಅಶಾಂತಿ ಕಾರಣ ಈ ಪಾಪ ಉದ್ಭವಿಸುತ್ತದೆ. ದೇವರು ನಮ್ಮ ಜೊತೆ ಇದ್ದಾರೆ ಎನ್ನುವುದೇ ಕ್ರಿಸ್ಮಸ್‌ನ ಶುಭ ಸಂದೇಶವಾಗಿದೆ. ನಿನ್ನ ನೆರೆಹೊರೆಯವರನ್ನು ಪ್ರೀತಿಸು,ಶತ್ರುಗಳನ್ನು ಪ್ರೀತಿಸು ಎಂದು ಏಸು ಹೇಳಿದ್ದರು. ನಾವೆಲ್ಲರು ಪ್ರೀತಿ, ಸಹಬಾಳ್ವೆಯಿಂದ ಬದುಕಬೆನ್ನುವುದು ದೇವರ ಉದ್ದೇಶವಾಗಿತ್ತು. ಜಗತ್ತು ಶಾಂತಿಯಿಂದ ಬಾಳ್ವೆ ನಡೆಸುವಂತೆ ಕ್ರಿಸ್ಮಸ್ ಸಂದೇಶ ಸಾರಬೆಕು ಎಂದರು.
ಡಾ.ಸಿ ಫರ್ನಾಂಡಿಸ್ ಕೊ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪೀಟರ್ ಮೆಂಡೊನ್ಸಾ ಮಾತನಾಡಿ, ಹೊಸ ವರ್ಷಕ್ಕೆ ಏಸುವಿನ ಜನನ ಎಂದಲ್ಲ 2022ವರ್ಷಗಳ ಹಿಂದೆಯೆ ಬೆತ್ಲಹಂನಲ್ಲಿ ಏಸುಕ್ರಿಸ್ತರ ಜನನವಾಗಿತ್ತು.ಅವರ ನೆನಪಿನಲ್ಲಿ ಹಬ್ಬ ಆಚರಿಸುತ್ತೇವೆ. ಏಸು ಕ್ರಿಸ್ತರು ದೇವ ಪುತ್ರರು. ಮಾನವ ಕುಲಕ್ಕೆ ಪಾಪದಿಂದ ಮುಕ್ತಗೊಳಿಸಿ ಶಾಂತಿ, ಪ್ರೀತಿ, ಸೇವೆಯ ಸಂದೇಶವನ್ನು ನೀಡಲು ಧರೆಗಿಳಿದರು. ನಾವು ಮಾಡಿದಂತಹ ಪಾಪ ಕರ್ಮಗಳನ್ನು, ದ್ವೇಷ, ಅಸೂಯೆಗಳನ್ನು ತೊಡೆದು ಹಾಕಿ ನವಜೀವನ ಆರಂಭಿಸಬೇಕು. ಪ್ರಭು ಏಸುವಿನ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ನಮ್ಮ ಕೆಲವೊಂದು ಆಚರಣೆಗಳು ಧಾರ್ಮಿಕವಾಗಿ, ಸಾಮಾಜಿಕವಾಗಿ ಸಿಮೀತವಾಗಿದೆ. ನಿಜವಾದ ಅರ್ಥಶಾಂತಿ ಮನೋಭಾವ, ಸೇವಾ ಮನೋಭಾವ, ಪ್ರೀತಿ ಮನೋಭಾವ ಹಂಚುವುದು ಈ ಹಬ್ಬದಲ್ಲಿ ಕಂಡುಕೊಳ್ಳಬೇಕಾಗಿದೆ. ನಮ್ಮಲ್ಲಿನ ಏಕತೆಯನ್ನು ಒಂದೂಗೂಡಿಸುವ ಕೆಲಸ ಈ ಡಿನರಿಯಿಂದ ನಡೆಯುತ್ತಿದೆ ಎಂದರು.
ಕಾರ್ಯಕ್ರಮದ ನೇತ್ರತ್ವ ವಹಿಸಿದ್ದ ಹೆನ್ರಿ ಲಿಮಾ ಮಾತನಾಡಿ, ನಾವು ಸನ್ಮಾರ್ಗದತ್ತ ನಡೆಯುವಂತೆ ಏಸು ಕ್ರಿಸ್ತರು ಸಂದೇಶ ಸಾರಿದ್ದರು. ಅವರ ಸವಿ ನೆನಪಿಗಾಗಿ ಕ್ರಿಸ್ಮಸ್ ಆಚರಿಸುತ್ತೇವೆ. ಒಬ್ಬರಿಗೊಬ್ಬರು ಸ್ನೇಹ,ಪ್ರೀತಿ ಹಂಚಲು ಈ ಹಬ್ಬ ಕಾರಣಿಭೂತವಾಗಿದೆ. ನಾವೆಲ್ಲರು ಪ್ರೀತಿಯಿಂದ ಇದ್ದರೆ ಪ್ರತಿನಿತ್ಯ ಏಸು ಜನಿಸುತ್ತಾನೆ. ಪ್ರೀತಿ,ಸಹಬಾಳ್ವೆಯೆ ನಾವು ಜಗತ್ತಿಗೆ ನೀಡುವ ದೊಡ್ಡ ಉಡುಗೊರೆಯಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರು ಡಯಾಸ್ ಮಟ್ಟದಲ್ಲಿ ಸ್ಪರ್ಧೆಗೆ ಅರ್ಹರಾಗುತ್ತಾರೆ. ಇನ್ನೂ ಹೆಚ್ಚಿನ ಸ್ಪರ್ಧಾಳುಗಳು ಭಾಗಿಯಾಗಬೇಕಿತ್ತು. ಇಂತಹ ಸ್ಪರ್ಧೆಗೆ ಪಾಲ್ಗೊಳ್ಳಲು,ಯೇಸುವಿನ ಆಗಮನ ಕೊಂಡಾಡಲು, ಅವರ ಸಂದೇಶ ಜನತೆಗೆ ಸಾರಲು ಸಮಯವಿಲ್ಲದಂತಾಗಿರುವುದು ಭೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಾದರು ಯುವ ಸಮೂಹ ಹಾಗೂ ಅವರ ಮಾರ್ಗದರ್ಶಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು. ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಸರ್ವರನ್ನು ಸ್ಮರಿಸಿದರು.
ಕ್ರಿಸ್ಮಸ್ ಕ್ಯಾರಲ್ ಸಿಂಗಿಂಗ್ ಸ್ಪರ್ದೆಯಲ್ಲಿ ಆರೋಗ್ಯ ಮಾತಾ ಗುಂಡಬಾಳ ಚರ್ಚ ವಿಭಾಗ,ಹೋಲಿ ಕ್ರಾಸ್ ಚೆಪೆಲ್ ಮೋಟೊ, ಸೆಂಟ್ ಫೀಟರ್ ಚರ್ಚ್ ಸಾನಾಮೋಟೋ, ಸೆಂಟ್ ಸೆಬಾಸ್ಟಿಯನ್ ಚರ್ಚ್ ಮಠದಕೇರಿ ವಿಭಾಗದ ಒಟ್ಟೂ 4 ತಂಡಗಳು ಭಾಗವಹಿಸಿದ್ದವು. ಸ್ಪರ್ಧಾ ಕಾರ್ಯಕ್ರಮದ ನಂತರ ಬಹುಮಾನ ವಿತರಣಾ ಕಾರ್ಯಕ್ರಮ ನಡೆದವು. ಪ್ರಥಮ ಬಹುಮಾನವನ್ನು ಹೋಲಿ ಕ್ರಾಸ್ ಚೆಪೆಲ್ ಮೋಟೊ ವಿಭಾಗ ಪಡೆದರೆ ದ್ವಿತಿಯ ಬಹುಮಾನ ಸೆಂಟ್ ಫೀಟರ್ ಚರ್ಚ್ ಸಾನಾಮೋಟೋಚರ್ಚ ವಿಭಾಗ ಪಡೆದುಕೊಂಡಿತು. ವೇದಿಕೆಯಲ್ಲಿ ಮೈನಾರಿಟಿ ಕೋ ಆಫರೆಟಿವ್ ಸೊಸೈಟಿಯ ನಿರ್ದೇಶಕ ಪಾಸ್ಕಲ್ ರೊಡ್ರಗಿಸ್, ಅಕ್ಷಯ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ರುಜಾರ್ ಡಯಾಸ್ ಉಪಸ್ಥಿತರಿದ್ದರು.