Slide
Slide
Slide
previous arrow
next arrow

ಪರಸ್ಪರ ಸಹಾಯ ಮಾಡುವ ಸೇವಾ ಮನೋಭಾವ ಮೂಡಬೇಕು: ಡಾ.ಜಿ.ಎಲ್.ಹೆಗಡೆ

300x250 AD

ಕುಮಟಾ: ಘಟ್ಟದ ಮೇಲಿನವು ಮತ್ತು ಕೆಳಗಿನವರು ಎಂಬ ಬೇಧ ಮರೆತು ನಾವೆಲ್ಲರೂ ಹವ್ಯಕರು ಎಂಬ ಭಾವನೆ ನಮ್ಮೆಲ್ಲರಲ್ಲಿ ಮೂಡುವ ಜೊತೆಗೆ ಪರಸ್ಪರ ಸಹಾಯ ಮಾಡುವ ಸೇವಾ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಬೇಕೆಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.
ತಾಲೂಕಿನ ಬಡಗಣಿಯ ಗೋಗ್ರೀನ್ ಮೈದಾನದಲ್ಲಿ ಹವ್ಯಕ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ನಡೆದ ಹವ್ಯಕ ಸಮಾವೇಶದಲ್ಲಿ ಸಮಾಜದಲ್ಲಿ ಹವ್ಯಕರ ಸಾಧ್ಯತೆ, ಆದ್ಯತೆ ಮತ್ತು ಬಾಧ್ಯತೆ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಿ.ಎಲ್.ಹೆಗಡೆ ಅವರು ಸಮಾಜದಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು. ಹವ್ಯಕ ಸಮಾಜವರು ಬಲಿಷ್ಠ ಮತ್ತು ಅಭಿಮಾನಪೂರ್ವಕರು. ನೂರಾರು ವರ್ಷಗಳ ಹಿಂದೆ ಹವ್ಯಕ ಸಮಾಜದವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಇಂದು ಆರ್ಥಿಕತೆಯಿಂದ ಸಂಪದ್ಭರಿತವಾಗಿದೆ. ಒಬ್ಬರು ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಂಡಾಗ ಸಂಘಟನೆ ಮತ್ತು ಸಹಾಯದ ಗುಣ ತಾನಾಗಿಯೇ ಬೆಳೆಯುತ್ತದೆ. ಹವ್ಯಕ ಸೇವಾ ಪ್ರತಿಷ್ಠಾನವು ತನ್ನ ಕಾರ್ಯವನ್ನು ವಿಸ್ತರಿಸಿ, ಬೀದಿ ಬೀದಿಗಳಲ್ಲಿರುವ ಒಡಕನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಬೇಕು. ಸಮಾಜದಲ್ಲಿ ಅನೇಕ ಬಡ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಅವರಿಗೆ ಆರ್ಥಿಕ ನೆರವು ನೀಡಿ, ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕು ಎಂದರು.
ಹವ್ಯಕ ಮಂಡಳದ ಅಧ್ಯಕ್ಷ ಜಿ.ಎಸ್.ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮತ್ತು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭುವನ್ ಭಾಗ್ವತ್ ಮಾತನಾಡಿ, ಸರ್ಕಾರಗಳು ಮತ್ತು ರಾಜಕಾರಣಿಗಳು ಹವ್ಯಕರ ಕ್ಷೇಮಾಭಿವೃದ್ಧಿಗೆ ಪ್ರಯತ್ನಿಸಬೇಕು. ಉದ್ಯೋಗ ಅಥವಾ ಇನ್ನಿತರ ಕಾರ್ಯಗಳಿಗೆ ಯುವಕರು ಹೊರಗಡೆ ತೆರಳುತ್ತಿದ್ದಾರೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹವ್ಯಕರ ಜನಸಂಖ್ಯೆ ಖಂಡಿತವಾಗಿಯೂ ಹೆಚ್ಚಳಗೊಳ್ಳಬೇಕು. ಅಲ್ಲದೇ ಹವ್ಯಕರು ಹವ್ಯಕರಾಗಿಯೇ ಉಳಿಯಬೇಕು ಎಂದು ಅಭಿಪ್ರಾಯಪಟ್ಟರು.
ವಿಚಾರ ಸಂಕಿರಣದ ಉದ್ಘಾಟನೆಯನ್ನು ವಿದ್ವಾನ್ ಕೃಷ್ಣಾನಂದ ಭಟ್ ಬಲ್ಸೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ.ಭಟ್ ವಹಿಸಿದ್ದರು. ವೇದಿಕೆಯಲ್ಲಿ ಬಿಇಒ ರಾಜೇಂದ್ರ ಭಟ್, ಹವ್ಯಕ ಪ್ರಮುಖರಾದ ಆರ್.ಜಿ.ಹೆಗಡೆ, ಐ.ಎಸ್.ಹೆಗಡೆ, ರಮೇಶ ಪ್ರಸಾದ, ಅರುಣ ಭಟ್ ಕಾಶಿ, ವಸಂತ್ ರಾವ್, ಮಂಜುನಾಥ ಭಟ್ ಸುವರ್ಣಗದ್ದೆ ಇತರರು ಇದ್ದರು. ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top