ಕುಮಟಾ: ಪಟ್ಟಣದ ಅಭಿವೃದ್ಧಿಗೆ ನಗರೋತ್ಥಾನ 4ನೇ ಹಂತದಲ್ಲಿ ಮಂಜೂರಾದ 4.5 ಕೋಟಿ ರೂ. ಕಾಮಗಾರಿಗೆ ತಡೆಯೊಡ್ಡುವ ದುರುದ್ದೇಶದಿಂದ ಕಾಂಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ ಅವರು ತಮ್ಮ ಗುತ್ತಿಗೆ ಕಂಪನಿಯ ಮೂಲಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರೋತ್ಥಾನ ಅಡಿಯಲ್ಲಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಅವರು ಸರ್ಕಾರದ ಮೇಲೆ ಒತ್ತಡ ಹೇರಿ 4.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದರು. ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದು, ಇನ್ನೇನು ಗುತ್ತಿಗೆದಾರ ಕಾಮಗಾರಿ ಆರಂಭಿಸುವ ಮೊದಲೇ ರವಿಕುಮಾರ ಶೆಟ್ಟಿ ಮತ್ತು ಶಾರದಾ ಶೆಟ್ಟಿ ಮಾಲಿಕತ್ವದ ಕೆ.ವಿ.ಶೆಟ್ಟಿ ಆ್ಯಂಡ್ ಕಂಪೆನಿಯು ಕಾಮಗಾರಿಗೆ ತಡೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಅಭಿವೃದ್ಧಿಯನ್ನು ಸಹಿಸದ ಇವರು ಇಂತಹ ಕೆಳ ಮಟ್ಟದ ರಾಜಕಾರಣಕ್ಕೆ ಇಳಿದಿರುವುದು ಬೇಸರದ ಸಂಗತಿ. 4.5 ಕೋಟಿ ರೂಪಾಯಿಯ ಕಾಮಗಾರಿಗೆ ಇವರ ಕಂಪೆನಿಯೂ ಟೆಂಡರ್ ಹಾಕಿತ್ತು. ಆದರೆ ಇವರಿಗೆ ಕೈ ತಪ್ಪಿ ಬೇರೆಯವರಿಗೆ ಟೆಂಡರ್ ಆಗಿದೆ ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಒಂದು ವೇಳೆ ಅವರಿಗೆ ಗುತ್ತಿಗೆ ಸಿಕ್ಕಿದ್ದರೂ ಚುನಾವಣೆ ಮುಗಿಯುವ ವರೆಗೂ ಕಾಮಗಾರಿ ಆರಂಭಿಸುತ್ತಿರಲಿಲ್ಲ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ಸರ್ಕಾರದ ಅಭಿವೃದ್ಧಿ ಸಹಿಸಲಾಗದೇ ಹುಳುಕು ಮಾಡುತ್ತಿದ್ದಾರೆ. 15 ರಿಂದ 20 ವರ್ಷ ಶಾಸಕರಾದ ಕುಟುಂಬದವರು ಇಂತಹ ಕೆಲಸ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಪಟ್ಟಣದ ಅಭಿವೃದ್ಧಿಗೆ ಸಹಕರಿಸಿ, ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ಹಿಂಪಡೆದು ಅಭಿವೃದ್ಧಿಗೆ ಸಹಕಾರ ನೀಡಲಿ ಎಂದರು.
ಪುರಸಭೆ ಸದಸ್ಯ ಸಂತೋಷ ನಾಯ್ಕ ಮತ್ತು ನಿಕಟಪೂರ್ವ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ ಮಾತನಾಡಿ, ನಗರೋತ್ಥಾನ ಕಾಮಗಾರಿಯಿಂದ ಸರ್ಕಾರದಿಂದ ಮಂಜೂರಾದ 4.5 ಕೋಟಿ ರೂ. ಅನುದಾನಕ್ಕೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಬೇಕು ಎನ್ನುವಾಗ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಶಾಸಕ ದಿನಕರ ಶೆಟ್ಟಿ ಮತ್ತು ಬಿಜೆಪಿ ಸರ್ಕಾರದ ಅಭಿವೃದ್ಧಿಯನ್ನು ನೋಡಲಾಗದವರು ಇಂತಹ ಕೆಲಸ ಮಾಡುತ್ತಾರೆ. ಕೂಡಲೇ ಅರ್ಜಿ ಹಿಂಪಡೆದು ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಲಿ ಎಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷೆ ಅನುರಾಧಾ ಬಾಳೇರಿ, ಉಪಾಧ್ಯಕ್ಷೆ ಸುಮತಿ ಭಟ್ಟ, ಚೇರಮೆನ್ ಶುಶೀಲಾ ಗೋವಿಂದ ನಾಯ್ಕ, ಸದಸ್ಯರಾದ ಮೋಹಿನಿ ಗೌಡ, ಪಲ್ಲವಿ ಮಡಿವಾಳ, ಶೈಲಾ ಗೌಡ, ತುಳುಸು ಗೌಡ, ಸೂರ್ಯಕಾಂತ ಗೌಡ, ಗೀತಾ ಮುಕ್ರಿ, ತಾಲೂಕಾ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಾ ಶೇಟ್, ಪ್ರಮುಖರಾದ ಪ್ರಸಾದ ನಾಯ್ಕ, ಮಧೂಸೂದನ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.