ಅಂಕೋಲಾ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಶಾಂತಾರಾಮ ನಾಯಕ ದಂಪತಿಗೆ ಅವರ ಮನೆಯಂಗಳದಲ್ಲಿ ಕರ್ನಾಟಕ ಸಂಘವು ಗೌರವ ಸಮರ್ಪಿಸಿ ಅಭಿನಂದನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಹಾಜರಿದ್ದ ಡಾ.ಶಿವಾನಂದ ನಾಯಕ ಮಾತನಾಡಿ, ಶಾಂತಾರಾಮ ನಾಯಕ ಹಿಚ್ಕಡ ಇವರೊಬ್ಬ ಸ್ನೇಹಜೀವಿ, ಮಾನವೀಯ ಕಳಕಳಿಯಿಂದ ಕೂಡಿದ ವ್ಯಕ್ತಿ. ಅವರ ಜೀವನೋತ್ಸಾಹ, ಸಾಹಿತ್ಯದ ಕುರಿತು ಅವರಿಗಿರುವ ಅಪಾರ ಪ್ರೀತಿ ನಮಗೆಲ್ಲ ಮಾದರಿ ಎಂದು ತಿಳಿಸಿದರು.
ಮತ್ತೊಬ್ಬ ಕರ್ನಾಟಕ ಸಂಘದ ವಿಶೇಷ ಆಮಂತ್ರಿತ ಎನ್.ವಿ.ನಾಯಕ ಮಾತನಾಡಿ, ಶಾಂತಾರಾಮ ನಾಯಕ ಅವರ ಬರಹಕ್ಕಿಂತಲೂ ಹೆಚ್ಚಾಗಿ ಅವರ ಮನೆಯಂಗಳದಲ್ಲಿ ಸಂಘಟಿಸಿದ ಕಾರ್ಯಕ್ರಮಗಳು ಹೆಚ್ಚು ಅವಿಸ್ಮರಣೀಯ. ಅವರಿಗೆ ಈ ಮೊದಲೇ ಸರ್ವಾಧ್ಯಕ್ಷತೆ ಸಿಗಬೇಕಿತ್ತು. ಈಗಲಾದರೂ ನ್ಯಾಯ ದೊರಕಿದೆ ಎಂದು ಹೇಳುತ್ತ ಅವರಿಗೆ ಶುಭ ಕೋರಿದರು.
ಕರ್ನಾಟಕ ಸಂಘದ ಅಧ್ಯಕ್ಷ ರಾಜೀವ ನಾಯಕ ಮಾತನಾಡುತ್ತ, ಶಾಂತಾರಾಮ ನಾಯಕ ಹಿಚ್ಕಡ ಅವರು ಸರಳ ಸಜ್ಜನಿಕೆಗೆ ಹೆಸರಾದವರು. ಎಲ್ಲರನ್ನೂ ಗೌರವದಿಂದ ಕಾಣುವ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಶ್ರೇಷ್ಠ ಸಾಹಿತಿ ಅಜಾತ ಶತ್ರುವಿನಂತೆ ಬದುಕಿದವರು ಎಂದು ಹೇಳಿ ಶುಭವನ್ನು ಕೋರಿದರು. ಸಾಹಿತಿ ಶ್ರೀಮತಿ ಹೊನ್ನಮ್ಮ ನಾಯಕ ಮಾತನಾಡಿ, ಶಾಂತಾರಾಮ ನಾಯಕ ವ್ಯಕ್ತಿತ್ವದ ಕುರಿತು ತಿಳಿಸಿ ಶುಭವನ್ನು ಕೋರಿದರು.
ಸನ್ಮಾನ ಸ್ವೀಕರಿಸಿದ ಸರ್ವಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡುತ್ತ, ನೀವೆಲ್ಲರೂ ಸೇರಿ ನನ್ನನ್ನು ವಿಶೇಷ ರೀತಿಯಲ್ಲಿ ಗೌರವಿಸಿದ್ದಕ್ಕೆ ಆಭಾರಿಯಾಗಿದ್ದೇನೆ. ಹೊಗಳಿಕೆಗಳು ಬೇಕು. ಅದು ಹೊನ್ನ ಶೂಲವಾಗಬಾರದು ಎಂದು ಹೇಳುತ್ತ ಸಂಘಕ್ಕೆ ಕೃತಜ್ಞತೆಯನ್ನು ಹೇಳಿದರು.
ಪ್ರಾರಂಭದಲ್ಲಿ ಮಂಜುನಾಥ ಇಟಗಿ ಪ್ರಾಸ್ತಾವಿಕ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಗೇಂದ್ರ ತೊರ್ಕೆ, ಪ್ರಭಾಕರ ಬಂಟ, ಎಸ್.ಆರ್. ನಾಯಕ, ಶ್ರೀ ವಿಠ್ಠಲ ಗಾಂವಕರ, ರವೀಂದ್ರ ಕೇಣಿ, ಪ್ರಕಾಶ ಕುಂಜಿ, ಡಾ. ಅರ್ಚನಾ ನಾಯಕ, ಮಹೇಶ ನಾಯಕ ಹಿಚ್ಕಡ, ಹೊನ್ನಪ್ಪ ಎನ್. ನಾಯಕ, ಶಾಂತಾರಾಮ ನಾಯಕ ಅವರ ಧರ್ಮಪತ್ನಿ ಅನಸೂಯ ನಾಯಕ, ಊರ ಹಿರಿಯರಾದ ರಮಾನಂದ ಬಿ. ನಾಯಕ, ಸಾಹಿತಿ ಕೃಷ್ಣ ನಾಯಕ, ರೋಹಿಣಿ ಕೃಷ್ಣ, ದೀಪ್ತಿ ನಾಯಕ ಮತ್ತು ಇನ್ನಿತರ ಅವರ ಹಿತೈಷಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಘದ ಸಹಕಾರ್ಯದರ್ಶಿ ವಾಸುದೇವ ನಾಯಕ ವಂದಿಸಿದರು.
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಗೌರವ ಸಮರ್ಪಣೆ
