ಅಂಕೋಲಾ: ಜೊಯಿಡಾ ತಾಲೂಕಿನ ಉಳವಿಯಲ್ಲಿ ನಡೆಯುತ್ತಿರುವ ಉ.ಕ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡರವರನ್ನು ಜಿಲ್ಲಾ ಕನ್ಮಡ ಸಾಹಿತ್ಯ ಪರಿಷತ್ತು ಅವರ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತವಾಗಿ ಆಹ್ವಾನಿಸಿತು.
ಬಳಿಕ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ, ಉಳವಿ ವಚನ ಸಾಹಿತ್ಯಕ್ಕೆ ತನ್ನದೇ ಅದ ಕೊಡುಗೆಯನ್ನು ನೀಡಿದಂತಹ ಶರಣ ಪರಂಪರೆಯ ಜಾಗೃತ ನೆಲ. ಇಂತಹ ಐತಿಹಾಸಿಕ ಪ್ರದೇಶ ಉಳವಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಶಾಂತಾರಾಮ ನಾಯಕರು ಈ ಜಿಲ್ಲೆಯ ಒಬ್ಬ ಶರಣನಂತೆಯೇ ಸಾಹಿತ್ಯ ಸೇವೆ ಮಾಡಿಕೊಂಡು ಬಂದವರು. ಈ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟದ ನೆನಪುಗಳನ್ನು ಗ್ರಾಂಥಿಕ ರೂಪದಲ್ಲಿ ಕಟ್ಟಿಕೊಟ್ಟವರು. ಹಲವಾರು ಕೃತಿಗಳ ಮೂಲಕ ಸಾಹಿತ್ಯ ಲೋಕಕ್ಕೆ ತನ್ನದೇ ಅದ ಕೊಡುಗೆ ನೀಡಿದವರು ಎಂದು ಹೇಳಿ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯೊಬ್ಬರೂ ಆಗಮಿಸುವಂತೆ ಮನವಿ ಮಾಡಿದರು.
ಆಮಂತ್ರಣ ಸ್ವೀಕರಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಶಾಂತಾತಾಮ ನಾಯಕ ಹಿಚಕಡರವರು ವಚನ ಸಾಹಿತ್ಯದ ಮೂಲಕ ಸಮಾನತೆಯ ಸಂದೇಶ ಸಾರಿದ ಉಳವಿಯಂತಹ ಐತಿಹಾಸಿಕ ಸ್ಥಳದಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ನನಗೆ ಖುಷಿಯಿದೆ. ಇದು ಬಯಸದೇ ಬಂದ ಭಾಗ್ಯ. ಈ ಸುದ್ದಿ ತಿಳಿದು ಅತ್ಮೀಯರೆಲ್ಲರೂ ಅಭಿನಂದಿಸುತ್ತಿರುವಾಗ ನಾನು ನನ್ನ ವಯಸ್ಸನ್ನೂ ಮೀರಿ ಸಂಭ್ರಮಿಸುತ್ತಿದ್ದೇನೆ. ಬಿ.ಎನ್. ವಾಸರೆಯವರ ಸಾರಥ್ಯದಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಹಳ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸುವುದೂ ಕೂಡಾ ಎಲ್ಲರ ಜವಾಬ್ದಾರಿಯಾಗಿದೆ ಎಂದ ಶಾಂತಾರಾಮ ನಾಯಕರು ಜಿಲ್ಲೆಯ ಸಾಹಿತ್ಯಾಸಕ್ತರೆಲ್ಲರೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿದರು. ಅಂಕೋಲಾ ತಾಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ವಂದಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಮೋಹನ ಹಬ್ಬು, ವಿಠ್ಠಲ ಗಾಂವಕರ, ಕೃಷ್ಣಾ ನಾಯಕ ಹಿಚಕಡ, ಮಹಾಂತೇಶ ರೇವಡಿ, ಜಿ.ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯಕ, ಶಾಂತಾರಾಮ ನಾಯಕರ ಧರ್ಮಪತ್ನಿ ಕಾಮಾಕ್ಷಿ ನಾಯಕ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಮುಂತಾದವರಿದ್ದರು.
ಉಳವಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಜಿಲ್ಲಾ ಕಸಾಪದಿಂದ ಅಧಿಕೃತ ಆಮಂತ್ರಣ
