ಕುಮಟಾ: ಹವ್ಯಕ ಸಮಾಜವನ್ನು ಬಲಪಡಿಸುವ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸದುದ್ದೇಶದಿಂದ ಹವ್ಯಕ ಸೇವಾ ಪ್ರತಿಷ್ಠಾನ ಸ್ಥಾಪನೆಯಾಗಿದ್ದು, ಇದರ ಸೇವಾ ಕಾರ್ಯ ಎಲ್ಲರಿಗೂ ತಲುಪಬೇಕೆಂಬ ಕಾರಣಕ್ಕೆ ಡಿ.11ರಂದು ಬಡಗಣಿಯ ಗೋಗ್ರೀನ್ ಮೈದಾನದಲ್ಲಿ ‘ಹವ್ಯಕ ಸಮಾವೇಶ’ ಹಮ್ಮಿಕೊಂಡಿದ್ದೇವೆ ಎಂದು ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಂ.ಜಿ.ಭಟ್ಟ ತಿಳಿಸಿದರು.
ಹವ್ಯಕ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಅವರು, ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಮಾಜದಲ್ಲಿ ತೊಂದರೆ ಅನುಭವಿಸುತ್ತಿರುವ ಕುಟುಂಬಸ್ಥರಿಗೆ ಆರ್ಥಿಕ ಸಹಾಯ ಮಾಡುವುದು. ಸಮಾಜವನ್ನು ಸಂಘಟಿಸುವುದರ ಜತೆಗೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಸಹಾಯ ಮಾಡುವ ಕಾರ್ಯವನ್ನು ಹವ್ಯಕ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದೇವೆ. ತಂದೆ ಮತ್ತು ತಾಯಿಯನ್ನು ಕಳೆದುಕೊಂಡು ಇನ್ನೊಬ್ಬರ ಆಶ್ರಯದಲ್ಲಿರುವ ಬಡ ವಿದ್ಯಾರ್ಥಿನಿಯ ಹೃದಯ ಸಂಬಂಧಿ ಖಾಯಿಲೆಗೆ ಶಸ್ತ್ರಚಿಕಿತ್ಸೆಗೆ ತಗಲುವ ಹಣವನ್ನು ಇತ್ತೀಚೆಗೆ ಹವ್ಯಕ ಸೇವಾ ಪ್ರತಿಷ್ಠಾನದ ಮೂಲಕ ಸಂಗ್ರಹಿಸಿ, ನೀಡಿದ್ದೇವೆ. ಪ್ರಚಾರ ಪಡೆದುಕೊಳ್ಳದೇ, ಸಮಾಜದ ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ನೀಡಿದ್ದೇವೆ ಮತ್ತು ಮುಂದೆಯೂ ನೀಡಲಿದ್ದೇವೆ ಎಂದರು.
ಗೋಗ್ರೀನ್ ಮೈದಾನದ ಹವ್ಯಕ ಪುರವರಾಧೀಶ್ವರಿ ಹೈಗುಂದ ವೇದಿಕೆಯಲ್ಲಿ ನಡೆಯಲಿರುವ ಹವ್ಯಕ ಸಮಾವೇಶದಲ್ಲಿ ಮಧ್ಯಾಹ್ನ 2.30 ಘಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸುವವರು. ಆಮಂತ್ರಿತರಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಂಸದ ಅನಂತಕುಮಾರ ಹೆಗಡೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ವಿಸ್ತಾರ ಮಿಡಿಯಾದ ಸಂಪಾದಕ ಹರಿಪ್ರಕಾಶ ಕೋಣೆಮನೆ, ಹೊಸದಿಗಂತ ಪತ್ರಿಕೆ ಸಂಪಾದಕ ವಿನಾಯಕ ಭಟ್ಟ ಮೂರೂರು, ಉದ್ಯಮಿ ಶ್ರೀನಿವಾಸ ಹೆಬ್ಬಾರ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎಂ.ಹೆಗಡೆ ಬಾಳೇಸರ, ಇತರರು ಪಾಲ್ಗೊಳ್ಳಲಿದ್ದಾರೆ. ಹವ್ಯಕ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಗುವುದು. ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ, ಸಾಂಪ್ರದಾಯಿಕ ಆಹಾರ ಮೇಳ ಮತ್ತು ವಿವಿಧ ಮಳಿಗೆಗೆಳನ್ನು ತೆರೆಯಲಾಗುತ್ತದೆ. ಹವ್ಯಕ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದರು ಎಂದರು.
ಪ್ರಧಾನ ಕಾರ್ಯದರ್ಶಿ ಆರ್.ಎನ್.ಹೆಗಡೆ ಮತ್ತು ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಕಾರ್ಯಕ್ರದಲ್ಲಿ ಸಮಾಜದಲ್ಲಿ ಹವ್ಯಕರ ಸಾಧ್ಯತೆ, ಆದ್ಯತೆ, ಬಾಧ್ಯತೆ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಕೃಷ್ಣಾನಂದ ಭಟ್ಟ ಬಲ್ಸೆ ಉದ್ಘಾಟಿಸಲಿದ್ದು, ಅಧ್ಯಕ್ಷ ಪ್ರೋ.ಎಂ.ಜಿ.ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಹವ್ಯಕರು ಕೃಷಿ ಮೂಲದಿಂದ ಬಂದವರಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಬಹಳ ಕಷ್ಟದಾಯಕವಾಗಿದೆ. ಅನೇಕ ಸವಾಲುಗಳು ನಮ್ಮಲಿದ್ದು, ಆರ್ಥಿಕವಾಗಿ ಅನೇಕ ಕುಟುಂಬಗಳು ಹಿಂದುಳಿದಿವೆ. ಅವರಿಗೆ ಸಹಾಯ ಮಾಡಿ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಹವ್ಯಕ ಸಮಾವೇಶ ಏರ್ಪಡಿಲಾಗಿದೆ. ನಮ್ಮ ಸಮಾಜದ ಜತೆ ಉಳಿದ ಸಮಾಜಕ್ಕೂ ಸಹಾಯ ಮಾಡುವ ಉದ್ದೇಶ ನಮ್ಮಲ್ಲಿದೆ. ಹೊಸದೊಂದು ವಿಚಾರದೊಂದಿಗೆ ಹವ್ಯಕ ಸಮಾವೇಶ ನಡೆಯಲಿದೆ. ನಮ್ಮ ಸಮಾಜದ ಜತೆ ಇತರ ಸಮಾಜ ಬಾಂಧವರು ಪಾಲ್ಗೊಳ್ಳಬಹುದು ಎಂದರು.
ಸಲಹಾ ಸಮಿತಿಯ ಎಸ್.ಜಿ.ಭಟ್ಟ ಮತ್ತು ಹೊಲನಗದ್ದೆ ಗ್ರಾಪಂ ಸದಸ್ಯೆ ಅನುರಾಧಾ ಭಟ್ಟ ಮಾತನಾಡಿ, ಸಂಘಟನಾತ್ಮಕ ಚಟುವಟಿಕೆಯಲ್ಲಿ ಹವ್ಯಕ ಸಮಾವೇಶ ಅಪೂರ್ವ ಸಂಗಮ. ಶಂಕರಾಚಾರ್ಯರ ಪೀಠದ 36 ನೆಯ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು 36 ಜನ ಸಾಧಕರಿಗೆ ಸನ್ಮಾನಿಸಲಿದ್ದಾರೆ. ಹವ್ಯಕರು ಹೆಚ್ಚಾಗಿ ಅಡಿಕೆ ಮತ್ತು ತೆಂಗಿನ ಬೆಳೆ ನಂಬಿದ್ದಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಕೂಲಿಕಾರ್ಮಿಕರ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಸಮಾವೇಶದಲ್ಲಿ ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಹೊರ ಜಿಲ್ಲೆಗಳಲ್ಲಿ ಎಲೆಚುಕ್ಕೆ ರೋಗದಿಂದ ಅಡಿಕೆ ಮರಗಳು ಸಾವನ್ನಪ್ಪುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದು ಹವ್ಯಕ ಸಮಾಜಕ್ಕೆ ದೊಡ್ಡ ಹೊಡೆತವಾಗಿದ್ದು, ಮುಂದಿನ ದಿನಗಳಲ್ಲಿ ಇವೆಲ್ಲವುಗಳನ್ನು ಎದರಿಸಲು ಇಂತಹ ಸಂಘಟನೆ ಅವಶ್ಯಕತೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಲಹಾ ಸಮಿತಿಯ ವಿ.ಐ.ಹೆಗಡೆ, ಪ್ರಮುಖರಾದ ವಿ.ಜಿ.ಹೆಬ್ಬಾರ, ಜಗದೀಶ ಭಟ್ಟ, ನಿರ್ಮಲಾ ಹೆಗಡೆ, ಪತ್ರಕರ್ತ ಪ್ರವೀಣ ಹೆಗಡೆ, ಜಯದೇವ ಬಳಗಂಡಿ, ಕೃಷ್ಣಾನಂದ ಭಟ್ಟ, ಅನುರಾಧಾ ಭಟ್ಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಡಿ.11ರಂದು ‘ಹವ್ಯಕ ಸಮಾವೇಶ’ : ಪ್ರೊ.ಎಂ.ಜಿ.ಭಟ್ಟ
