ಕಾರವಾರ: ಬಂದರು, ಜಟ್ಟಿ ಸೇರಿದಂತೆ ಇತರೆ ಅಭಿವೃದ್ಧಿ ಚಟುವಟಿಕೆಗಳಿಗೆ ವಿರೋಧ ಮಾಡುವ ಬದಲು ಉತ್ತಮ ಯೋಜನೆಗಳಿಗೆ ಸಹಕಾರ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತಾಲೂಕಿನ ಅಮದಳ್ಳಿಯಲ್ಲಿ ಕೋಸ್ಟ್ ಗಾರ್ಡ್ ವಿವಾಹಿತ ವಸತಿಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಜನರ, ಮೀನುಗಾರರ ರಕ್ಷಣೆಯ ಜವಾಬ್ದಾರಿ ಭಾರತೀಯ ಕೋಸ್ಟ್ ಗಾರ್ಡ್ ಮೇಲಿದೆ. ಸಮುದ್ರ ಮಾರ್ಗದ ಮೂಲಕ ನಡೆಯಬಹುದಾದ ಭಯೋತ್ಪಾದಕ ತಡೆಯಲು ಕ್ರಮಕೈಗೊಳ್ಳುತ್ತಿದೆ ಎಂದರು. ರಾಜ್ಯದ 320 ಕಿ.ಮೀ ಸಮುದ್ರತೀರದ ಪೈಕಿ ಹೆಚ್ಚಿನ ಕಡಲತೀರ ಉತ್ತರಕನ್ನಡ ಜಿಲ್ಲೆಯಲ್ಲಿದ್ದರೂ ಮೀನುಗಾರಿಕೆಯಲ್ಲಿ ಹಿಂದೆ ಇದೆ ಎಂದೂ ಹೇಳಿದರು.
ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಕೋಸ್ಟ್ ಗಾರ್ಡ್ಗೆ ಕೇಂದ್ರ ಸರಕಾರ ಪ್ರಾಮುಖ್ಯತೆ ನೀಡಿದೆ. ಸಮುದ್ರದ ಗಡಿ, ಮೀನುಗಾರರಿಗೆ ರಕ್ಷಣೆ ಕೋಸ್ಟ್ ಗಾರ್ಡ್ ಪಾತ್ರ ಮುಖ್ಯ. ಜಿಲ್ಲೆಯಲ್ಲಿ ಅಣು ಸ್ಥಾವರ, ನೌಕಾನೆಲೆ ಸೂಕ್ಷ್ಯ ಯೋಜನೆ ಇದೆ. ಈಗ ಹೆಚ್ಚಿನ ಪ್ರಮಾಣದಲ್ಲಿ ರಕ್ಷಣೆ ಬೇಕು. ಆದರೆ ಅನೇಕ ಜನ ನಿರಾಶ್ರಿತವಾಗಿದ್ದಾರೆ. ಕೋಸ್ಟ್ ಗಾರ್ಡ್ ಕಚೇರಿಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ನಮ್ಮವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡರ್ ಮನೋಜ್ ವಿ.ಬಾಡಕರ ಮಾತನಾಡಿ, ಅಭಿವೃದ್ಧಿ ಕಾರ್ಯಕ್ಕೆ ವಿರೋಧ ಸಾಮಾನ್ಯ. ಆದರೆ ಜನರಿಗೆ, ಪರಿಸರಕ್ಕೆ ಮಾರಕವಾಗುವಂಥ ಯೋಜನೆಗೆ ವಿರೋಧ ಮಾಡಿದರೆ ತೊಂದರೆ ಇಲ್ಲ. ಕೋಸ್ಟ್ ಗಾರ್ಡ್ ಕಚೇರಿ ನಿರ್ಮಾಣವಾಗುವುದರಿಂದ ರಕ್ಷಣೆಯ ಜೊತೆಗೆ ಆಸ್ಪತ್ರೆ, ಅಂಗಡಿ ಸೇರಿದಂತೆ ಅನೇಕ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ. ಅಂಗಡಿಗಳನ್ನು ನಡೆಸಲು ಸ್ಥಳೀಯರಿಗೆ ಅವಕಾಶದ ಜೊತೆಗೆ ಸುತ್ತಮುತ್ತಲಿನ ಪ್ರದೇಶವು ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಗೋವಾದ ಮುಖ್ಯ ಎಂಜಿನಿಯರ್ ರಾಜೇಶ ಕುಲ್ಗೋಡ್, ಕೋಸ್ಟ್ ಗಾರ್ಡ್ ಡಿಐಜಿ ಪಿ.ಕೆ.ಮಿಶ್ರಾ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ಅಮದಳ್ಳಿ ಪಂಚಾಯತ್ ಅಧ್ಯಕ್ಷೆ ಆಶಾ ನಾಯ್ಕ, ನೌಕಾನೆಲೆ, ಬಂದರು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಮೊದಲು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಪಾರಿವಾಳ ಹಾರಿ ಬಿಡುವ ಸಂಸ್ಕೃತಿ ಇತ್ತು. ಆದರೆ ಈಗ ಚೀತಾ ಬಿಡುವಷ್ಟರ ಮಟ್ಟಿಗೆ ಭಾರತ ಮುಂದೆ ಸಾಗಿದೆ. ಇದರೊಂದಿಗೆ ಭಾರತದ ಸಾಮರ್ಥ್ಯ ಅರ್ಥವಾಗುತ್ತದೆ.
• ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ