ಯಲ್ಲಾಪುರ: ನನ್ನ ಕ್ಷೇತ್ರದಲ್ಲಿ ಕಳೆದ 6 ವರ್ಷಗಳಲ್ಲಿ 29 ದೊಡ್ಡ ಸೇತುವೆ ಮಂಜೂರಿ ಮಾಡಿಸಿ ಅದರಲ್ಲಿ 11 ಸೇತುವೆ ಉದ್ಘಾಟಿಸಿ, ಉಳಿದ 18 ಸೇತುವೆ ನಿರ್ಮಾಣ ಕೊನೆಯ ಹಂತದಲ್ಲಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನೇ ದೃಷ್ಟಿಯನ್ನಾಗಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಖಾನಾಪುರ- ತಾಳಗುಪ್ಪಾ ರಾಜ್ಯ ಹೆದ್ದಾರಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತಾಟವಾಳ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಕಾರ್ಯ ಪ್ರಗತಿ ನಡೆಯುತ್ತಿದೆ. ಈ ಸೇತುವೆ ಬಹುವರ್ಷಗಳ ಬೇಡಿಕೆಯಾಗಿತ್ತು. 3 ಸಾರಿ ಮಂಜೂರಿ ಹಂತದವರೆಗೆ ಹೋಗಿ ಹಣ ಬಿಡುಗಡೆಯಾಗಿಲ್ಲ. ಅಂತೂ ಪ್ರಯತ್ನಿಸಿ ಬೇಡ್ತಿ ಮತ್ತು ಸಿಡ್ಲಗುಂಡಿ ಸೇತುವೆ ಮಾಡುವಲ್ಲಿ ಯಶಸ್ವಿಯಾದ ಸಮಾಧಾನವಿದೆ. ಇಲ್ಲೆ ಪಕ್ಕದ ಕಾರ್ಕುಂಡಿ ಸೇತುವೆಗೂ ಸಧ್ಯದಲ್ಲೇ ಶೀಲಾನ್ಯಾಸ ನೆರವೇರಲಿದೆ.ಗುತ್ತಿಗೆದಾರರೂ ಕಾಮಗಾರಿಯನ್ನು 5- 6 ವರ್ಷಗಳ ಕಾಲ ಏಳೆಯದೇ ಅತೀ ಶೀಘ್ರದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮುಗಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಅನೇಕ ವರ್ಷಗಳ ಬೇಡಿಕೆಯ ಸೇತುವೆ ಇದು. ಅಭಿವೃದ್ಧಿ ಕಾರ್ಯ ಮುಗಿದ ಮೇಲೆ ಸರಿಯಾಗಿಲ್ಲ ಎನ್ನುವಂತಿಲ್ಲ. ಕಾಮಗಾರಿ ನಡೆಯುತ್ತಿರುವಾಗಲೇ ಗಮನವಹಿಸಿ. ಮತದಾರರೇ ನಮ್ಮ ದೇವರು. ಜನರ ಒಳಿತಿಗಾಗಿ ಉತ್ತಮ ಗುಣಮಟ್ಟದ ಕೆಲಸ ಮಾಡಿ ಎಂದರು.
ಕಣ್ಣಿಗೇರಿ ಗ್ರಾ.ಪಂ. ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮಾತನಾಡಿದರು. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎಂ.ಭಟ್ಟ, ಸ್ವಾಗತಿಸಿ, ನಿರ್ವಹಿಸಿದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಎನ್.ಕೆ.ಕುರಂದರಕರ್, ಕಿರವತ್ತಿ ಗ್ರಾ.ಪಂ. ಅಧ್ಯಕ್ಷೆ ಜಬಿನಾ ಪಟೇಲ್, ಕಣ್ಣಿಗೇರಿ ಗ್ರಾ.ಪಂ ಉಪಾಧ್ಯಕ್ಷೆ ಸುನಂದಾ ಮರಾಠಿ, ಸದಸ್ಯರಾದ ದಿವ್ಯಾ ಮರಾಠಿ, ಜ್ಯೋತಿ ಸಿದ್ದಿ, ನಾಗವೇಣಿ ಪಟಗಾರ, ರಹಮತ್ತ ಅಬ್ಬಿಗೇರಿ, ಗುತ್ತಿಗೆದಾರ ಜಿ.ಜೆ.ನಾಯ್ಕ ಸೇರಿದಂತೆ ಅನೇಕ ಹಿರಿಯರು ಉಪಸ್ಥಿತರಿದ್ದರು.