ಕುಮಟಾ: ಮನೆ ಬಾಗಿಲಿಗೆ ಮಾಶಾಸನ ಯೋಜನೆಯಡಿ ತಾಲೂಕಿನ ಹೆಗಡೆಯ ಕಲ್ಕೋಡ್‌ನ ವಿಶೇಷ ಚೇತನ ಮಹಿಳೆ ಮನೆ ಬಾಗಿಲಿಗೆ ತೆರಳಿದ ಶಾಸಕ ದಿನಕರ ಶೆಟ್ಟಿ ಅವರು ಅಂಗವಿಕಲ ಪಿಂಚಣಿ ಪತ್ರ ವಿತರಿಸುವ ಮೂಲಕ ಸರಳತೆ ಮೆರೆದರು.
ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆ ಫಲಾನುಭವಿಗಳ ಮನೆ ಬಾಗಿಲಿಗೆ ಮಾಶಾಸನ ಸೌಲಭ್ಯವನ್ನು ತಲುಪಿಸುವ ಕಾರ್ಯಕ್ರಮದ ನಿಮಿತ್ತ ಹಾಗೂ ವಿಶ್ವ ವಿಕಲಚೇತನರ ದಿನದಂದೆ ಕಲ್ಕೋಡ್‌ನ ಹಾಲಕ್ಕಿ ಸಮಾಜದ ವಿಶೇಷ ಚೇತನ ಮಹಿಳೆ ದೀಪಾ ಗೌಡರ ಮನೆಗೆ ತೆರಳಿದ ಶಾಸಕ ದಿನಕರ ಶೆಟ್ಟಿ, ಅವರಿಗೆ ಪಿಂಚಣಿ ಪತ್ರ ನೀಡಿದರು.
ನಂತರ ಮಾತನಾಡಿದ ಅವರು, ನಮ್ಮ ಬಿಜೆಪಿ ಸರ್ಕಾರದ ಅದ್ಭುತ ಯೋಜನೆ. ಈ ಯೋಜನೆಗೆ ನಮ್ಮ ಮುಖ್ಯಮಂತ್ರಿಯಾದ ಬೊಮ್ಮಾಯಿಯವರು ಚಾಲನೆಯನ್ನು ಈಗಾಗಲೇ ನೀಡಿದ್ದಾರೆ. ಕಂದಾಯ ಸಚಿವರಾದ ಆರ್ ಅಶೋಕ ರವರು ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತರಲು ಬಹಳ ಶ್ರಮ ವಹಿಸಿದ್ದಾರೆ. ವೃದ್ಧರು, ವಿಕಲಚೇತನರು, ವಿಧವೆಯರು ಹಾಗೂ ಅಸಹಾಯಕರಿಗೆ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಗೆ ತೆರಳಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ 155245 ನಂಬರ್‌ಗೆ ಕರೆಮಾಡಿ ತಮಗೆ ಪಿಂಚಣಿ ಮಾಡಿಕೊಡುವ ಬಗ್ಗೆ ಮನವಿ ಸಲ್ಲಿಸಿದಾಗ ನಮ್ಮ ಗ್ರಾಮ ಲೆಕ್ಕಾಧಿಕಾರಿ ಗ್ರಾಮ ಸಹಾಯಕರು ಸದಸ್ಯರು ಅವರ ಮನೆಗೆ ತೆರಳಿ ಅದಕ್ಕೆ ಬೇಕಾಗುವ ಕಾಗದ ಪತ್ರ ತೆಗೆದುಕೊಂಡು 72 ಗಂಟೆಯಲ್ಲಿ ಅವರಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಣೆ ಮಾಡುವ ಉತ್ತಮ ಯೋಜನೆ. ಅದರಂತೆ ನಮ್ಮ ಕಾರ್ಯಕರ್ತರು, ಸದಸ್ಯರು ದೀಪಾ ಗೌಡ ರವರಿಗೆ ಈ ಪಿಂಚಣಿ ಬರುವಂತೆ ಮಾಡಲು ಶ್ರಮ ವಹಿಸಿದ ಪರಿಣಾಮ ಅವರಿಗೆ ಮಾಶಾಸನ ಮಂಜೂರಿ ಆಗಿದೆ. ಅದರ ಪತ್ರವನ್ನು ವಿತರಿಸಲಾಗಿದೆ. ಈ ಯೋಜನೆ ಪ್ರಯೋಜನ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ವಿನೋದರಾವ್, ಕಂದಾಯ ನಿರೀಕ್ಷಕರಾದ ಗಾಣಿಗೇರ್, ಹೆಗಡೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ವೆಂಕಟರಮಣ ಪಟಗಾರ, ಗ್ರಾ ಪಂ ಸದಸ್ಯರಾದ ಮಂಜುನಾಥ ಪಟಗಾರ, ಸುರೇಶ ಪಟಗಾರ, ಹನುಮಂತ ಪಟಗಾರ, ರಾಮಕೃಷ್ಣ ಪಟಗಾರ, ರಾಮಚಂದ್ರ ಪಟಗಾರ, ರಾಜು ಮುಕ್ರಿ, ವಿದ್ಯಾ ಗೌಡ ಪ್ರಮುಖರಾದ ಉಮೇಶ ನಾಯ್ಕ ಸಾಹಿತಿ ಉದಯ ಮಡಿವಾಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಇತರೆ ಕೆಲ ಫಲಾನುಭವಿಗಳಿಗೆ ಗ್ರಾಮ ಪಂಚಾಯತ ಆವರಣದಲ್ಲಿ ವಿತರಣೆ ಮಾಡಿದರು.. ಗ್ರಾಮ ಪಂಚಾಯತ ವತಿಯಿಂದ ಅಭಿವೃದ್ಧಿ ಅಧಿಕಾರಿ ವೆಂಕಟ್ರಮಣ ಪಟಗಾರ ರವರು ಶಾಸಕ ದಿನಕರ ಶೆಟ್ಟಿ ಯವರಿಗೆ ಪುಸ್ತಕ ನೀಡಿ ಗೌರವಿಸಿದರು.. ನಮಗೊಂದು ಶೌಚಾಲಯ ನಿರ್ಮಿಸಿಕೊಡಿ ಎಂದು ವಿಕಲ ಚೇತನ ಮಹಿಳೆ ಶಾಸಕರಲ್ಲಿ ವಿನಂತಿಸಿದಾಗ ತಕ್ಷಣ ಸ್ಪಂದಿಸಿದ ಶಾಸಕರು ಪಿಡಿಓ ರವರಿಗೆ ಅವರಿಗೆ ಶಾಚಾಲಯವನ್ನು ಗ್ರಾ ಪಂ ವತಿಯಿಂದ ನಿರ್ಮಿಸಿಕೊಡಲು ಸೂಚಿಸಿದರು.