ಶಿರಸಿ: ಕರ್ನಾಟಕದ ತಿರುಪತಿ ಎಂದೇ ಹೆಸರಾದ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಭೂದಾನ ಅಭಿಯಾನದ ಶ್ರೀ ಹರಿ ಪಾದಾರ್ಪಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಶನಿವಾರ ಹಾಗೂ ಡಿ.11ರಂದು ಒಟ್ಟೂ ಎರಡು ದಿನ ನಡೆಯಲಿರುವ ಈ ಭೂದಾನ ಅಭಿಯಾನದ ಮಹಾಯಜ್ಞದ ಪ್ರಥಮ ದಿನವೇ ಭಕ್ತರು ಭಾವ ಪರವಶರಾಗಿ ಪಾಲ್ಗೊಂಡಿದ್ದಾರೆ. ಶನಿವಾರ ಭೂವರಾಹ ಮಂತ್ರ ಹವನ, ಪ್ರಧಾನ ಸಂಕಲ್ಪ, ಭೂ ಪರಿಗ್ರಹ, ಭೂ ಪೂಜಾ ಹಾಗೂ ದಾನ ಪ್ರಕ್ರಿಯೆ ನಡೆದವು.
ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಾಮಾಜಿಕ ಪ್ರಮುಖ ಎಂ.ವಿ.ಜೋಶಿ ಕಾನಮೂಲೆ, ಪ್ರಧಾನ ಅರ್ಚಕ ವಿ.ಶ್ರೀನಿವಾಸ ಭಟ್ಟ ಮಂಜುಗುಣಿ, ವಿ.ಎನ್.ಹೆಗಡೆ ಬೊಮ್ಮನಳ್ಳಿ, ಇಂಜನೀಯರ್ ಅರುಣ ನಾಯಕ, ಅರಣ್ಯಾಧಿಕಾರಿ ಎಸ್.ಜಿ.ಹೆಗಡೆ, ಆರ್. ಜಿ.ಭಟ್ಟ, ಆಡಳಿತ ಮಂಡಳಿ ಪ್ರಮುಖರು ಇತರರು ಇದ್ದರು.
ದೇವಾಲಯಕ್ಕೆ ಸುಧೀರ್ಘ ಕಾಲ ಅತೀ ಕಡಿಮೆ ಸಂಬಳದಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ಭಾಲಚಂದ್ರ ಖರೆ, ಶಂಭು ಹೆಗಡೆ ಕಿರುಗಾರ, ಕಮಲಾಕರ ಶೇಟ್, ವೆಂಕಟರಮಣ ಭಂಡಾರಿ ಅವರನ್ನು ಹಾಗೂ ಭೂದಾನ ಅಭಿಯಾನದಲ್ಲಿ ಪಾಲ್ಗೊಂಡವರನ್ನು ಗೌರವಿಸಲಾಯಿತು. ದೇವಾಲಯವು ಹೂವು, ವಿದ್ಯುತ್ ದೀಪಗಳಿಂದ ಅಲಂಕೃತವಾಗಿತ್ತು. ನಾಲ್ಕು ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.