ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರ ಸಂಘದಿ0ದ 11ನೇ ದಿನದ ಅಹೋರಾತ್ರಿ ಧರಣಿ ಮುಂದುವರೆದಿದ್ದು, ಸರ್ಕಾರಕ್ಕೆ ಸವಾಲಾಗಿ ‘ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ ಚಳವಳಿ’ ನಡೆಸಿದರು.
ಕಬ್ಬು ಎಫ್‌ಆರ್‌ಪಿ ದರದಿಂದ ರೈತರಿಗೆ ಮೋಸವಾಗಿದೆ. ರಾಜ್ಯ ಸಲಹಾ ಬೆಲೆ ನಿಗದಿ ಮಾಡಿ ಕಬ್ಬಿನಿಂದ ಬರುವ ಇತರ ಉತ್ಪನ್ನಗಳ ಲಾಭ ಹಂಚಿಕೆ ಮಾಡಬೇಕು. ಪೊಲೀಸರು ಮುಖ್ಯಮಂತ್ರಿ ಮನೆ ಬಳಿ ಹೋಗಲು ಬಿಡುತ್ತಿಲ್ಲ, ನಮ್ಮನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ನಿಲ್ಲಿಸಿ, ಎಂದು ಘೋಷಣೆ ಕೂಗುತ್ತಾ ಸಿಎಂ ಮನೆ ಕಡೆ ಹೊರಟ ರೈತರನ್ನು ರೈತ ಮಹಿಳೆಯರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು.
ಸುಮ್ಮಸುಮ್ಮನೆ ಮುಂಜಾಗ್ರತ ಕ್ರಮ ಬಂಧನ ಬೇಡ, ನ್ಯಾಯ ಕೊಡಿಸಿ ಇಲ್ಲವೇ ನ್ಯಾಯಾಧೀಶರ ಮುಂದೆ ನಿಲ್ಲಿಸಿ, ನಿಮಗೆ ಸಾಧ್ಯವಾದರೆ ಮಾತ್ರ ನಮ್ಮನ್ನು ಬಂಧಿಸಿ, ಎಂದು ಎಸಿಪಿಗೆ ಎಚ್ಚರಿಕೆ ನೀಡಿದರು, ನಾವು ಮುಖ್ಯಮಂತ್ರಿ ಮನೆಗೆ ಹೋಗಲು ಬಿಡುತ್ತಿಲ್ಲ, ಬಂಧಿಸಿ ನ್ಯಾಯಾಲಯಕ್ಕೆ ಕರೆದು ಕೊಂಡು ಹೋಗಿಲ್ಲ, ಇದು ಗುಂಡಾಗಿರಿ ವರ್ತನೆ ಎಂದು ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಪ್ರತಿಭಟನೆ…
ರಾಜ್ಯ ಸರ್ಕಾರ ಜೇಡರ ಬಲೆಯಲ್ಲಿ ಸಿಲುಕಿದೆ, ರೈತರನ್ನು ಈ ಸುಳಿಯಲ್ಲಿ ಸಿಲುಕಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿAದ ಮಂಡ್ಯ, ಬಿಜಾಪುರ, ಮೈಸೂರು ಜಿಲ್ಲೆಗಳಲ್ಲಿ ನಿರಂತರ ಧರಣಿ ಚಳವಳಿ ನಡೆಸಲಾಗುತ್ತಿದೆ. ಮಂತ್ರಿಗಳು ಸುಳ್ಳು ಹೇಳಿಕೊಂಡು ರಾಜ್ಯಭಾರ ಮಾಡುತ್ತಿದ್ದಾರೆ. ಸಕ್ಕರೆ ಸಚಿವರು ಪಾಪದ ಕೂಸಾಗಿ ಕೆಲಸ ಮಾಡುತ್ತಿದ್ದಾರೆ, ರಾಜ್ಯದ ರೈತರು ಬಿಜೆಪಿ ಶಾಸಕರು, ಸಂಸದರ ಮನೆ ಅಥವಾ ಕಚೇರಿ ಮುಂದೆ ರಾಜ್ಯಾದ್ಯಂತ 5 ರಂದು ಸೋಮವಾರ ಪ್ರತಿಭಟನೆ ಮಾಡಿ ಎಚ್ಚರಿಸಲಿದ್ದೇವೆ ಎಂದು ಹೇಳಿದರು.