ಸಿದ್ದಾಪುರ: ಕನ್ನಡವನ್ನು ಉಳಿಸುವ ಹಾಗೂ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಭಾಷೆ ಹಾಗೂ ಸಂಸ್ಕೃತಿಯ ಉಳಿವು ಆಗಬೇಕಿದೆ. ರಾಜ್ಯದ ಮೂಲೆ ಮೂಲೆಯಲ್ಲಿಯೂ ಕನ್ನಡ ಮಾತನಾಡುವಂತಾಗಾಬೇಕು. ಮಾತೃಭಾಷೆ ನಮ್ಮದಾಗಬೇಕು. ಆ ಕುರಿತು ರಾಜ್ಯ ಸರ್ಕಾರವೂ ಸಹ ಕಾರ್ಯಕ್ರಮ ರೂಪಿಸುತ್ತಿದೆ. ಹಾವೇರಿಯಲ್ಲಿ ನಡೆಯುವ ಸಾಹಿತ್ಯೋತ್ಸವ ಇದು ಕನ್ನಡದ ವಿಜಯೋತ್ಸವ ಆಗಲಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.
ಅವರು ತಾಲೂಕಿನ ಭುವನಗಿರಿ ಭುವೇಶ್ವರಿ ಸನ್ನಿದಿಯಲ್ಲಿ ಹಾವೇರಿಯಲ್ಲಿ ಜ.6,7 ಹಗೂ 8ರಂದು ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗವಾಗಿ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಭುವನಗಿರಿ ಕ್ಷೇತ್ರವೇ ಐತಿಹಾಸಿಕ ಹಿನ್ನೆಲೆಯುಳ್ಳದ್ದಾಗಿದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಇಂದು ನಡೆಸುತ್ತಿರುವ ಕಾರ್ಯಕ್ರಮ ದಾಖಲಾಗುವಂತಾಗಿದೆ. ಇದು ಮುಂದಿನವರಿಗೆ ದಾರಿ ದೀಪವಾಗಲಿದೆ.ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯ ಪರಿಷತ್ತಿನ ಸದಸ್ಯರ ನೋಂದಣಿ ಕಾರ್ಯ ಇಂದಿನಿAದ ಆರಂಭವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ ಸರಳವಾದ ಭಾಷೆಯೇ ಕನ್ನಡ. ಇದು ನಮ್ಮ ಮಾತೃ ಭಾಷೆ ಆಗಿರುವುದು ನಮ್ಮೆಲ್ಲರ ಹೆಮ್ಮೆ ಆಗಬೇಕು. ನಮ್ಮ ನುಡಿ ಸರಿಯಾಗಿದ್ದರೆ ಸಂಸ್ಕಾರವೂ ಉತ್ತಮವಾಗಿರುತ್ತದೆ. ಸಂಸ್ಕಾರ ಬರುವುದೇ ಮಾತೃಭಾಷೆಯಿಂದ. ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸಬೇಕಾದರೆ ನಮ್ಮ ಭಾಷೆ ಮರೆಯಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಸಂಸ್ಕೃತಿ ಹಾಗೂ ಭಾಷೆಯ ಉಳಿವಿಗಾಗಿ ಮುಂದಾಗಿದೆ ಎಂದರು.
ಶಿರಸಿ ಸಹಾಯಕ ಆಯುಕ್ತ ದೇವರಾಜ್ ಆರ್ ಮಾತನಾಡಿದರು.ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ, ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಹಸೀಲ್ದಾರ ಸಂತೋಷ ಭಂಡಾರಿ, ಬಿಇಒ ಸದಾನಂದ ಸ್ವಾಮಿ, ತಾ.ಪಂ ವ್ಯವಸ್ಥಾಪಕ ದಿನೇಶ, ಬೇಡಕಣಿ ಗ್ರಾಪಂ ಸದಸ್ಯರಾದ ಈರಪ್ಪ ನಾಯ್ಕ, ಗೋವಿಂದ ನಾಯ್ಕ, ವಿವಿಧ ಜಿಲ್ಲೆಯ ಕಸಾಪ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ವಂದಿಸಿದರು. ಪ್ರೊ. ಎಂ.ಕೆ.ನಾಯ್ಕ ನಿರ್ವಹಿಸಿದರು.ಈ ಸಂದರ್ಭದಲ್ಲಿ ವಿವಿಧ ಜಾನಪದ ಕಲಾತಂಡಗಳಿ0ದ ಚಂಡೆ ವಾದನ ಹಾಗೂ ಡೊಳ್ಳಿನ ಕುಣಿತ ನಡೆಯಿತು.
ಸಿದ್ದಾಪುರದಲ್ಲಿ ಸ್ವಾಗತ
ಭುವನಗಿರಿಯಿಂದ ಹೊರಟ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ರಥಕ್ಕೆ ಸಿದ್ದಾಪುರದ ಹೊಸೂರಿನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ತಹಸೀಲ್ದಾರ ಸಂತೋಷ ಭಂಡಾರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಸಾಹಿತಿಗಳು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಇದ್ದರು.
ಭುವನಗಿರಿಯ ಭುವನೇಶ್ವರಿ ಸನ್ನಿದಿಯಲ್ಲಿ ಹಚ್ಚುತ್ತಿರುವ ಜ್ಯೋತಿ ಇದು ಕನ್ನಡಕ್ಕೆ ದಾರಿ ದೀಪ. ಇಂದು ಬೆಳಗಿದ ಜ್ಯೋತಿಯಿಂದಲೇ ಜನವರಿ 6ರಂದು ಜರುಗುವ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಾಗುವುದು. ಮುಂದಿನ ದಿನದಲ್ಲಿ ಎಲ್ಲಿಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವಾಗಲೂ ಭುವನಗಿರಿಯಲ್ಲಿ ಜ್ಯೋತಿಯನ್ನು ಬೆಳಗಿಸಿ ಅದೇ ಜ್ಯೋತಿಯಿಂದ ಸಮ್ಮೇಳನ ಉದ್ಘಾಟಿಸಲಾಗವುದು.
- ಡಾ.ಮಹೇಶ ಜೋಶಿ, ಕಸಾಪ ರಾಜ್ಯಾಧ್ಯಕ್ಷ