ಯಲ್ಲಾಪುರ: ವೈಷ್ಣೋದೇವಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೊರಟ ಮಂಗಳೂರು ಮೂಲದ ಅಯ್ಯಪ್ಪ ವೃತಧಾರಿ ಪ್ರಭಾತ್ ಕುಮಾರ್ ಯಲ್ಲಾಪುರ ಪಟ್ಟಣವನ್ನು ತಲುಪಿದರು.
ಜಗತ್ತಿನ ಸಕಲ ಜೀವರಾಶಿಗಳ ಒಳಿತಿಗಾಗಿ ಜಮ್ಮುಕಾಶ್ಮೀರದ ವೈಷ್ಣೋದೇವಿಯಿಂದ ಏಕಾಂಗಿಯಾಗಿ ಶಬರಿಮಲೆಗೆ ಇವರು ಪಾದಯಾತ್ರೆ ಬೆಳೆಸಿದ್ದು ಗುರುವಾರ ಪಟ್ಟಣದ ಜೋಡುಕೆರೆ ಮಾರುತಿ ದೇವಸ್ಥಾನದಲ್ಲಿ ವಿಶ್ರಮಿಸಿ ಮುಂದೆ ಸಾಗಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗತ್ತಿನ ಸಕಲ ಜೀವರಾಶಿಗಳು ಸುಖ ಸಂತೋಷ, ನೆಮ್ಮದಿಯಿಂದ ಜೀವಿಸುವಂತಾಗಲೆಂದು ಪ್ರಾರ್ಥಿಸಿ ಪಾದಯಾತ್ರೆಯನ್ನು ಕೈಗೊಂಡಿದ್ದೇನೆ. ಕಳೆದ 6 ವರ್ಷಗಳಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದು, ಈ ಬಾರಿ ಮಂಗಳೂರಿನಲ್ಲಿ ಮಾಲೆ ಧರಿಸಿ ಆಗಸ್ಟ್ 31ರಂದು ಜಮ್ಮುಕಾಶ್ಮೀರದ ಮಾತಾ ವೈಷ್ಣೋದೇವಿ ದರ್ಶನ ಪಡೆದು ಇರುಮುಡಿ ಧರಿಸಿ ಪಾದಯಾತ್ರೆ ಆರಂಭಿಸಿದ್ದೇನೆ. ಪ್ರತಿದಿನ 25 ರಿಂದ 30 ಕಿಲೋಮೀಟರ್ ಕ್ರಮಿಸುವ ಈ ಪಾದಯಾತ್ರೆ ಕಷ್ಟಕರವಾಗಿದ್ದರೂ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ನೀಡುತ್ತಿದೆ ಎಂದರು.