ಗೋಕರ್ಣ: ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಕನ್ನಡದಲ್ಲೇ ಬರೆದಿರುವ ರಾಮಾಯಣವನ್ನು ರಾಜ್ಯದ ಮನೆ ಮನೆಗೆ ಪುಸ್ತಕ ರೂಪದಲ್ಲಿ ತಲುಪಿಸುವ ವಿಶೇಷ ಅಭಿಯಾನವನ್ನು ಶ್ರೀರಾಮಚಂದ್ರಾಪುರ ಮಠದ ‘ಧರ್ಮಭಾರತಿ’ ಹಮ್ಮಿಕೊಂಡಿದೆ.
30ನೇ ಚಾತುರ್ಮಾಸ್ಯದ ಅಂಗವಾಗಿ, ಮಹರ್ಷಿ ವಾಲ್ಮೀಕಿ ಬರೆದ ಮೂಲ ರಾಮಾಯಣದ ಪುನರವತರಣ ಇದಾಗಿರುತ್ತದೆ. ಮೊದಲಿಗೆ ಕನ್ನಡದಲ್ಲಿ ಹಾಗೂ ನಂತರ ವಿವಿಧ ಭಾಷೆಗಳಲ್ಲಿ ಇದನ್ನು ಪ್ರಕಟಿಸಲಾಗುವುದು ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಮಗ್ರ ರಾಮಾಯಣ ಮುಗಿಯುವವವರೆಗೆ ಧರ್ಮಭಾರತಿ ಮಾಸಿಕದ ಪ್ರತಿ ಸಂಚಿಕೆಯ ಪ್ರತಿ ಪುಟವೂ ರಾಮಾಯಣಮಯವಾಗಿರುತ್ತದೆ. ವಿಶೇಷವೆಂದರೆ ಧರ್ಮಭಾರತಿ ಇದನ್ನು ಉಚಿತವಾಗಿ ವಿತರಿಸುತ್ತದೆ. ಮೊದಲ ಹಂತದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ.
ಹತ್ತಾರು ಲಕ್ಷ ಜನರು ಮೂಲ ರಾಮಾಯಣವನ್ನು ಓದುವಂತೆ ಮಾಡುವ ಪ್ರಯತ್ನ ಇದಾಗಿದ್ದು, ಲಕ್ಷ ಲಕ್ಷ ಮನೆಗಳಲ್ಲಿ ನೂರಾರು ರಾಮಾಯಣ ಪುಸ್ತಕ ಇರುವಂತೆ ಮಾಡುವ ಮಹದುದ್ದೇಶದ ಯೋಜನೆ ಇದಾಗಿದೆ. ಹಲವು ತಲೆಮಾರುಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.