ಹೊನ್ನಾವರ: ಈಡಿಗ ನಿಗಮ ಮಂಡಳಿ ರಚಿಸಿ 500 ಕೋಟಿ ಅನುದಾನ ಮೀಸಲಿಡಬೇಕು. ಶ್ರೀಸಿಂಗಧೂರು ಚೌಡೇಶ್ವರಿ ದೇವಸ್ಥಾನದಲ್ಲಿ ಸರ್ಕಾರದ ದೌರ್ಜನ್ಯ ನಿಲ್ಲಿಸಬೇಕು. ರಾಜಧಾನಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಸ್ಥಾಪಿಸಬೇಕು. ಈಡಿಗರು ಹೆಚ್ಚಿರುವ ಕ್ಷೇತ್ರಗಳಲ್ಲಿ ಈಡಿಗರಿಗೂ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಟಿಕೆಟ್ ನೀಡಿಕೆಯೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 2023ರ ಜ.6ರಿಂದ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿರುವ ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿಯವರು ನ.28ರಿಂದ ಎರಡು ದಿನಗಳ ಕಾಲ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಸಂಚರಿಸಲಿದ್ದಾರೆ.
ಮುಂಜಾನೆ 10 ಗಂಟೆಗೆ ಅಂಡಗಿ ಮಠದಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಪುನೀತ ರಾಜಕುಮಾರ ಅನಾಥಶ್ರಮಕ್ಕೆ ಭೇಟಿ ನೀಡಲಿದ್ದು, ಸಂಜೆ 4 ಗಂಟೆಗೆ ಅಂಕೋಲಾದ ನಾಮಧಾರಿ ಸಭಾಭವನಕ್ಕೆ ಈಡಿಗ ಸಮಾಜದ ಸಂಘಟನೆಯ ಮತ್ತು ಇನ್ನಿತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. 29ರಂದು ಗೋಕರ್ಣದಲ್ಲಿ ಸಭೆ ನಡೆಸಿ ಮಧ್ಯಾಹ್ನ 3 ಗಂಟೆಗೆ ಹೊನ್ನಾವರದಲ್ಲಿ ಸಭೆ ನಡೆಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.