ಭಟ್ಕಳ: ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಡಿ.ಎಸ್.ಆರ್.ಟಿ.ಸಿ ಆಶ್ರಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಬಳ್ಳಾರಿಯಲ್ಲಿ ನಡೆದ ರಾಜ್ಯ ಮಟ್ಟದ ಪಾತ್ರಾಭಿನಯ ಸ್ಪರ್ಧೆಯಲ್ಲಿ ಕುಂಟವಾಣಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಪ್ಪಟ ಗ್ರಾಮೀಣ ಭಾಗದ ಈ ವಿದ್ಯಾರ್ಥಿಗಳು ಎನ್.ಸಿ.ಆರ್.ಟಿ ನೇತೃತ್ವದಲ್ಲಿ ನವದೆಹಲಿಯಲ್ಲಿ ಡಿ.6 ರಿಂದ 9ರವರೆಗೆ ನಡೆಯುವ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಶಾಲೆಯ ಮುಖ್ಯಾಧ್ಯಾಪಕಿ ವೀಣಾ ಸಭಾಹಿತ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರ ಸಹಕಾರದೊಂದಿಗೆ ಹಿಂದಿ ಶಿಕ್ಷಕ ಆನಂದ ನಾಯ್ಕ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳಾದ ಪೂಜಾ ಗೊಂಡ, ಗಣೇಶ ಶೆಟ್ಟಿ, ಅಂಕುಶ ಶೆಟ್ಟಿ, ಮಹೇಶ್ರೀ ಗೊಂಡ ಹಾಗೂ ಧನುಶ್ ಗೊಂಡ ಅವರು ಹಿಂದಿ ವಿಷಯದಲ್ಲಿ ಮಕ್ಕಳಲ್ಲಿ ಮೊಬೈಲ್ ಅತಿಯಾದ ಬಳಕೆಯಿಂದ ಆಗುವ ದೈಹಿಕ ಮತ್ತು ಮಾನಸಿಕ ಪರಿಣಾಮಗಳ ಬಗ್ಗೆ ಮಾಡಿದ ಮನೋಜ್ಞ ಅಭಿನಯ ನಿರ್ಣಾಯಕರು ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಈಶ್ವರ ನಾಯ್ಕ, ಡಯಟ್ ಪ್ರಾಂಶುಪಾಲ ಎನ್.ಜಿ.ನಾಯ್ಕ, ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಹಾಗೂ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಪರಮೇಶ್ವರ ಭಂಡಾರಿ ವಿದ್ಯಾರ್ಥಿಗಳ ಈ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಜೊತೆಗೆ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು ಮತ್ತು ಪಾಲಕ- ಪೋಷಕರು ಮಕ್ಕಳ ಸಾಧನೆಯನ್ನು ಅಭಿನಂದಿಸಿದ್ದಾರೆ.