ಅಂಕೋಲಾ: ಪಟ್ಟಣದ ಕನಸಿಗದ್ದೆಯಲ್ಲಿ ಕಾಳಿಂಗ ಸರ್ಪದ ತಲೆಯ ಮೇಲೆ ಕೊಳಲನ್ನು ಹಿಡಿದು ನಿಂತಿರುವ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಕಳೆದ ಒಂಭತ್ತು ವರ್ಷಗಳಿಂದ ಕನಸೆಗದ್ದೆಯ ಶ್ರೀ ಕೃಷ್ಣ ಮಿತ್ರ ಮಂಡಳಿಯವರು ವಿವಿಧ ರೂಪದ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಜ್ರಂಭಣೆಯಿಂದ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಪ್ರಸ್ತುತ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಕಳೆದ ಗುರುವಾರದಂದು ಸ್ಥಳೀಯ ಕಲಾಕಾರ ಅನೀಲ್ ಎಂ.ಮಹಾಲೆಯವರ ಕೈಚಳಕದಲ್ಲಿ ಅರಳಿದ ಪೌರಾಣಿಕ ಸನ್ನಿವೇಶವಾದ ಕಾಳಿಂಗ ಮರ್ದನ ಶ್ರೀಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ನೆರವೇರಿಸಲಾಗುತ್ತಿದೆ. ಡಿ. 03ರಂದು ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಶ್ರೀದೇವರ ಮಹಾಪೂಜೆ, ನಂತರ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮರುದಿನ ರವಿವಾರ ಮೆರವಣಿಗೆಯೊಂದಿಗೆ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನೆರವೇರಲಿದೆ. ಭಕ್ತಾದಿಗಳು ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲೂ ಉಪಸ್ಥಿತರಿದ್ದು ದೇವರ ಕೃಪೆಗೆ ಪಾತ್ರರಾಗಲು ಮಿತ್ರ ಮಂಡಳಿಯವರು ವಿನಂತಿಸಿದ್ದಾರೆ.