ಭಟ್ಕಳ: ಭಟ್ಕಳ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನನ್ನು ಕೊನೆಗೂ ಬದಲಾವಣೆ ಮಾಡಿದ್ದು ನೂತನ ಅಧ್ಯಕ್ಷರಾಗಿ ವೆಂಕಟೇಶ್ ನಾರಾಯಣ ನಾಯ್ಕರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶ ಮಾಡಿದ್ದಾರೆ.
ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂತೋಷ್ ನಾಯ್ಕ ಇದ್ದು, ಅವರ ಬದಲಾವಣೆಗೆ ಮಾಜಿ ಶಾಸಕರು ಪ್ರಯತ್ನ ನಡೆಸಿದ ಆರೋಪ ಕೇಳಿ ಬಂದಿತ್ತು. ಇದರ ನಡುವೆ ಕ್ಷೇತ್ರದಲ್ಲಿ ಟಿಕೇಟ್‌ಗಾಗಿ ಸಂತೋಷ್ ನಾಯ್ಕ ಸಹ ಅರ್ಜಿ ಸಲ್ಲಿಸಿದ್ದು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ನಾಮಧಾರಿ ಸಮುದಾಯದವರಿಗೆ ಟಿಕೇಟ್ ಕೊಡುವಂತೆ ಸಂತೋಷ್ ನಾಯ್ಕ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿನ ನಾಮಧಾರಿ ಸಮುದಾಯದ ಮುಖಂಡರುಗಳಾದ ಜೆ.ಡಿ ನಾಯ್ಕ, ದೀಪಕ್ ನಾಯ್ಕ ಮಂಕಿ, ಅಯ್ಯಪ್ಪ ನಾಯ್ಕ ಸೇರಿದಂತೆ ಹಲವರು ತಂಡವನ್ನ ಮಾಡಿಕೊಂಡು ಈ ಬಾರಿ ಕ್ಷೇತ್ರದಿಂದ ತಮ್ಮ ಸಮುದಾಯದವರಿಗೆ ಟಿಕೇಟ್ ನೀಡುವಂತೆ ನಾಯಕರ ಬಳಿಯೂ ಒತ್ತಡ ಹಾಕಿದ್ದು ಇದು ಕಾಂಗ್ರೆಸ್ ಪಕ್ಷದಲ್ಲಿಯೇ ಎರಡು ಗುಂಪುಗಳಾದಂತಾಗಿತ್ತು.
ಎರಡು ದಿನಗಳ ಹಿಂದೆ ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜನಜಾಗೃತಿ ಸಮಾವೇಶಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಳಿ ಮಾಜಿ ಶಾಸಕ ಮಂಕಾಳ ವೈದ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಈ ಬಾರಿ ಕ್ಷೇತ್ರದಲ್ಲಿ ತಾನು ಅಭ್ಯರ್ಥಿಯಾಗಲಿದ್ದು ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಸಂಘಟನೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಲೇ ಬೇಕು ಎಂದು ಪಟ್ಟು ಹಿಡಿದ ಹಿನ್ನಲೆಯಲ್ಲಿ ಸ್ವತಹ ಡಿ.ಕೆ ಶಿವಕುಮಾರ್ ಅವರೇ ಆಸಕ್ತಿ ವಹಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡಿ ಆದೇಶಿಸಿದ್ದಾರೆ.
ಚುನಾವಣೆ ಹೊಸ್ತಿಲಲ್ಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಂಕಾಳ ವೈದ್ಯರ ವಿರೋಧಿ ಗುಂಪಿಗೆ ಹಿನ್ನಡೆಯಾದಂತಾಗಿದ್ದು, ಕ್ಷೇತ್ರದಲ್ಲಿ ಇನ್ನಷ್ಟು ರಾಜಕೀಯ ಚುರುಕುಗೊಳ್ಳುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ
