ಹೊನ್ನಾವರ: ವಿಧಾನಸಭಾ ಚುನಾವಣೆಗೆ ನಾಲ್ಕೈದು ತಿಂಗಳು ಇರುವಾಗಲೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು ಕ್ಷೇತ್ರದಲ್ಲಿ ನಾಯಕರುಗಳ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಆರೋಪ- ಪತ್ಯಾರೋಪ ಮಾಡಿಕೊಳ್ಳುತ್ತಿರುವುದು ದೊಡ್ಡ ಮಟ್ಟದ ಸದ್ದು ಮಾಡುತ್ತಿರುವುದು ಜನಪ್ರತಿನಿಧಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ತಾಲೂಕಿನಲ್ಲಿ ಪ್ರತಿ ಬಾರಿಯು ಆಡಳಿತಾರೂಢ ಶಾಸಕರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಆರೋಪ ಕೇಳಿ ಬರುವುದು ಸರ್ವೆ ಸಾಮನ್ಯವಾಗಿದೆ. ಈ ಹಿಂದೆ ಪಕ್ಷೇತರವಾಗಿ ಚುನಾವಣೆ ನಿಂತು ಶಾಸಕರಾಗಿ ಬಳಿಕ ಕಾಂಗ್ರೇಸ್ ಪಕ್ಷ ಸೇರಿದ ಅಂದಿನ ಶಾಸಕರಾದ ಮಂಕಾಳ ವೈದ್ಯ ಕುರಿತು ಕಳೆದ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಗರ ನಡುವೆ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿತ್ತು.
ಮಂಕಾಳ ವೈದ್ಯರ ಎದುರಾಳಿಯಾಗಿದ್ದ ಅಭ್ಯರ್ಥಿಗಳ ಬೆಂಬಲಿಗರು ಅವರ ವಿರುದ್ಧ ಆರೋಪಗಳ ಸುರಿಮಳೆಯೇ ಹರಿಸಿದ್ದು ಅಂದು ಸಾಕಷ್ಟು ಬಾರಿ ಪ್ರಕರಣ ದಾಖಲಿಸಿದರೂ ಪೊಲೀಸ್ ಇಲಾಖೆ ಇದರ ನಿಯಂತ್ರಣ ಮಾಡಲು ಸಾಧ್ಯವಾಗಿರಲಿಲ್ಲ. ಅಂದಿನ ಶಾಸಕರಾಗಿದ್ದ ಮಂಕಾಳ ವೈದ್ಯ ಸೋಲಿಗೆ ಇದು ಒಂದು ಕಾರಣವಾಗಿತ್ತು. ಮಂಕಾಳ ವೈದ್ಯ ಶಾಸಕರಾದರೆ, ಭಟ್ಕಳದಲ್ಲಿ ಕಸಾಯಿಖಾನೆ ತೆರೆಯಲಾಗುತ್ತದೆ. ಮಸೀದಿ ನಿರ್ಮಾಣವಾಗುತ್ತದೆ. ಇಂತಹ ಹಲವು ಹೇಳಿಕೆಯನ್ನು ಹರಿಬಿಡಲಾಗಿತ್ತು.
ನಂತರದ ಚುನಾವಣೆಯಲ್ಲಿ ಶಾಸಕರಾಗಿ ಸುನೀಲ್ ನಾಯ್ಕ ಆಯ್ಕೆಯಾಗಿದ್ದು, ನಡೆದ ಚುನಾವಣೆಯಲ್ಲಿ ಇದೀಗ ಚುನಾವಣೆಗೆ ನಾಲ್ಕೈದು ತಿಂಗಳು ಇರುವಾಗಲೇ ಸುನೀಲ್ ನಾಯ್ಕ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆರೋಪಗಳನ್ನ ಮಾಡಲು ಪ್ರಾರಂಭಿಸಿದ್ದಾರೆ. ನಕಲಿ ಅಕೌಂಟ್‌ಗಳ ಮೂಲಕ ಕೆಲವರು ಆರೋಪ ಮಾಡುತ್ತಿದ್ದರೆ ಇನ್ನೊಂದೆಡೆ ಮಾಜಿ ಹಾಗೂ ಹಾಲಿ ಶಾಸಕರುಗಳಿಗೆ ತಮ್ಮ ಸ್ವಪಕ್ಷದ ಕಾರ್ಯಕರ್ತರ ಆರೋಪಗಳು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಇಬ್ಬರು ನಾಯಕರುಗಳ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆರೋಪ ಪ್ರತ್ಯಾರೋಪ ರಾಜಕೀಯ ಸಾಕಷ್ಟು ಸದ್ದು ಮಾಡುತ್ತಿದೆ. ರಾಜಕೀಯ ಬಿಟ್ಟು ವೈಯಕ್ತಿಕ ಆರೋಪಗಳನ್ನ ಸಹ ಮಾಡಲು ಪ್ರಾರಂಭಿಸಿದ್ದು, ಕ್ಷೇತ್ರದಲ್ಲಿ ಸದ್ಯ ಎಲ್ಲೆಡೆ ಈ ಸಾಮಾಜಿಕ ಜಾಲತಾಣಗಳ ಆರೋಪದ ವಿಚಾರವೇ ಸದ್ದು ಮಾಡುತ್ತಿದ್ದು ಇದು ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಲಾಭ ನಾಯಕರುಗಳಿಗೆ ನೀಡಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.