ಹೊನ್ನಾವರ: ತಾಲೂಕಿನ ನಗರಬಸ್ತಿಕೇರಿ ಗ್ರಾ.ಪಂ. ವ್ಯಾಪ್ತಿಯ 2.85 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಅವರು ಗೇರುಸೊಪ್ಪಾ ಜ್ಯೋತಿನಗರದ ಶಾಲಾ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಿದರು.
‘ಗ್ರಾಮಗಳ ಅಭಿವೃದ್ಧಿ ದೇಶದ ಅಭಿವೃದ್ಧಿ, ಹಳ್ಳಿಗಳತ್ತ ಶಾಸಕ ಸುನೀಲ ನಾಯ್ಕ ಚಿತ್ತ’ ಎನ್ನುವ ಶೀರ್ಷಿಕೆಯಡಿ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭ ಹಾಗೂ ಅಭಿವೃದ್ಧಿ ಹರಿಕಾರರಿಗೆ ಸಾರ್ವಜನಿಕ ಸನ್ಮಾನ ಎನ್ನುವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಶಾಸಕ ಸುನೀಲ ನಾಯ್ಕ, ಶರಾವತಿ ಎಡಬಲದಂಡೆಯನ್ನು ಹೊಂದಿರುವ ಗ್ರಾಮ ಇದಾಗಿದ್ದು, ಮಾದರಿ ಪಂಚಾಯತಿಯನ್ನಾಗಿಸುವ ಕನಸು ಕಂಡಿದ್ದೇನೆ. ಅದರಂತೆ ಈ ಭಾಗದಲ್ಲಿ ಪ್ರಥಮ ಗ್ರಾಮವಾಸ್ತವ್ಯದ ಬಳಿಕ 3 ಸೇತುವೆ, ಶಾಲಾ ಕೊಠಡಿ, ಅಂಗನವಾಡಿ ಕಟ್ಟಡ, 1.65 ಲಕ್ಷ ವೆಚ್ಚದ ರಸ್ತೆಗೆ ಈಗಾಗಲೇ ಚಾಲನೆ ನೀಡಿದ್ದು, 2 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಮುಂದಿನ ದಿನದಲ್ಲಿ ಚಾಲನೆ ಸಿಗಲಿದೆ. ನನ್ನ ಶಾಸಕತ್ವ ಅವಧಿಯಲ್ಲಿ ಮೆಟ್ಟಿನಗದ್ದೆ, ಕೆಂಬಾಲ, ಅರಸಿಕೇರಿ ಭಾಗದಲ್ಲಿ ರಸ್ತೆ ನಿರ್ಮಾಣವಾಗಿದೆ. ಈಗಾಗಲೇ ಗೇರುಸೊಪ್ಪಾ ವಿದ್ಯುತ್ ಉಪಕೇಂದ್ರಕ್ಕೆ ಘಟಕಕ್ಕೆ 1.20 ಲಕ್ಷ ಮಂಜೂರಾಗಿದೆ. ಮುಂದಿನ ದಿನದಲ್ಲಿ 7 ಪಂಚಾಯತಿಗೆ ನೇರವಾಗಿ ಕೆ.ಪಿ.ಸಿಯಿಂದ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.
ಉದ್ಯಮಿದಾರ ವೆಂಕ್ರಟಮಣ ಹೆಗಡೆ ಕವಲಕ್ಕಿ ಮಾತನಾಡಿ, ನುಡಿದಂತೆ ನಡೆದ ಹೆಮ್ಮೆಯ ಶಾಸಕರು. ‘ಮತ್ತೊಮ್ಮೆ ಸುನೀಲ ನಾಯ್ಕ’ ಎನ್ನುವ ಅಭಿಯಾನಕ್ಕೆ ಚಾಲನೆ ನೀಡಿ 2023ರಲ್ಲಿ ಮತ್ತೊಮ್ಮೆ ಶಾಸಕರನ್ನಾಗಿಸುವ ಮೂಲಕ ಗ್ರಾಮದ ಅಭಿವೃದ್ಧಿ ಮಾಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯ್ಕ, ಮಹಾತ್ಮ ಗಾಂಧಿ ಕಂಡ ಗ್ರಾಮದ ಅಭಿವೃದ್ಧಿ ಕನಸನ್ನು ನನಸು ಮಾಡಿರುವುದು ಸುನೀಲ ನಾಯ್ಕ. ಇದುವರೆಗೂ ನಮ್ಮ ಗ್ರಾಮವನ್ನು ಕುಗ್ರಾಮ ಎಂದು ಕರೆಯುತ್ತಿದ್ದರು. ಇದೀಗ ಬೆಳಕಿನಡೆಗೆ ಗ್ರಾಮ ಸಾಗಲು ಶಾಸಕರ ಅಭಿವೃದ್ಧಿಯು ಕಾರಣವಾಗಿದೆ. 2.85 ಕೋಟಿ ವೆಚ್ಚದಲ್ಲಿ ಗ್ರಾಮದ 10 ಕಡೆಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಇದುವರೆಗೆ 34 ಕೋಟಿ ವೆಚ್ಚದ ಕಾಮಗಾರಿ ಗ್ರಾಮದಲ್ಲಿ ನಡೆದಿದೆ ಎಂದು ಕರಪತ್ರ ಪ್ರದರ್ಶಿಸಿದರು.
ಗ್ರಾಮಸ್ಥರು, ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾ.ಪಂ. ಸದಸ್ಯ ಮಹೇಶ ನಾಯ್ಕ ಸ್ವಾಗತಿಸಿ ರಾಮಚಂದ್ರ ನಾಯ್ಕ ವಂದಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಜಯಂತಿ ನಾಯ್ಕ, ಇ.ಓ ಸುರೇಶ ನಾಯ್ಕ, ಬಳಕೂರು ವಿ.ಎಸ್.ಎಸ್ ಅಧ್ಯಕ್ಷ ಕೇಶವ ನಾಯ್ಕ, ಸಾರದಹೊಳೆ ನಾಮಧಾರಿ ಸಂಘದ ಧರ್ಮದರ್ಶಿ ಸುಬ್ರಾಯ ನಾಯ್ಕ, ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ, ಸುಬ್ರಾಯ ನಾಯ್ಕ, ಮಂಕಿ ಗ್ರಾ.ಪಂ. ಸದಸ್ಯರು, ಬಿಜೆಪಿ ಮುಖಂಡರು, ಊರಿನ ಗಣ್ಯರು ಉಪಸ್ಥಿತರಿದ್ದರು.