ಭಟ್ಕಳ: ತಾಲೂಕಿನ ಪುರಾಣ ಪ್ರಸಿದ್ಧ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದ 23ನೇ ವರ್ಷದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಅತ್ಯಂತ ಭಕ್ತಿಪೂರ್ವಕವಾಗಿ ನಡೆಯಿತು. ಮುಂಜಾನೆಯಿಂದಲೇ ಊರಿನ ಹಾಗೂ ಪರ ಊರಿನ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಬಂದು ದೇವರ ದರ್ಶನವನ್ನು ಪಡೆದು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
ಶ್ರೀ ಕ್ಷೇತ್ರದ ಮುಖ್ಯ ದೇವರುಗಳಾದ ಜಟಕಾ, ಮಹಾಸತಿ, ಪ್ರಧಾನ ಹಾಗೂ ಬ್ರಹ್ಮ ದೇವರುಗಳು ಬಗೆಬಗೆಯ ಹೂವಿನಿಂದ ಅಲಂಕೃತಗೊಂಡಿದ್ದಲ್ಲದೇ, ಚಿನ್ನ ಹಾಗೂ ಬೆಳ್ಳಿಯ ಒಡವೆಗಳಿಂದ ಶೋಭಿತಗೊಂಡಿದ್ದವು. ಪ್ರಮುಖ ದೇವರುಗಳ ಜೊತೆಗೆ ಪರಿವಾರ ದೇವರುಗಳಿಗೂ ಶ್ರೀಕ್ಷೇತ್ರದ ಪದ್ಧತಿಯಂತೆ ಮೊದಲು ಧೂಪನೆಣೆಯ ಪೂಜಾ ಸೇವೆ ಮಾಡಿ ಮಧ್ಯಾಹ್ನದಲ್ಲಿ ಮಹಾಪೂಜೆ ನೆರವೇರಿಸಲಾಯಿತು. ನಂತರ ನೆರೆದಿದ್ದ ಭಕ್ತಾದಿಗಳಿಗೆಲ್ಲ ಪ್ರಸಾದ ವಿತರಿಸಲಾಯಿತು.
ಸಾಯಂಕಾಲ ಸೂರ್ಯಾಸ್ತದ ತರುವಾಯ ಶಿರಾಲಿಯ ಚಿತ್ರಾಪುರ ಸಂಸ್ಥಾನದ ಪ್ರತಿನಿಧಿಗಳು ದೀಪಾರಾಧನೆಗೆ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಹಾಗೂ ದೀಪೋತ್ಸವ ಸಮಿತಿಯವರು ಜೊತೆಗೂಡಿ ಜಟಕಾ ಗುಡಿಯ ಮುಂದೆ ಇಡಲಾದ ಬೃಹತ್ ತುಪ್ಪದ ದೀಪವನ್ನು ಬೆಳಗಿಸಿ, ನಂತರ ನೆರೆದಿದ್ದ ಭಕ್ತರಿಗೆಲ್ಲ ದೀಪಗಳನ್ನು ಬೆಳಗುವ ಅವಕಾಶ ಮಾಡಿಕೊಟ್ಟರು. ಸಾವಿರಾರು ಭಕ್ತಾದಿಗಳು ದೇವಾಲಯದ ಪ್ರಾಂಗಣ ಹಾಗೂ ಸುತ್ತಲೂ ಇಟ್ಟಿರುವ ಮಣ್ಣಿನ ಹಣತೆಗಳನ್ನು ಬೆಳಗಿಸಿ ತಮ್ಮ ತಮ್ಮ ಇಷ್ಟಾರ್ಥವನ್ನು ಬೇಡಿಕೊಂಡರು. ಕೆಲವು ಭಕ್ತರು ತಾವೇ ಹಿತ್ತಾಳೆಯ ದೀಪಗಳನ್ನು ತಂದು ದೇವಸ್ಥಾನದ ಪೂಜಾರಿಯವರ ಮೂಲಕ ದೇವರ ಮುಂದೆ ಸಂಕಲ್ಪ ಮಾಡಿಸಿಕೊಂಡು ತುಪ್ಪ ಹಾಗೂ ಎಣ್ಣೆಯ ದೀಪಗಳನ್ನು ಬೆಳಗಿಸಿ ಅವುಗಳನ್ನು ದೇವಸ್ಥಾನಕ್ಕೆ ಒಪ್ಪಿಸಿದರು. ಎಲ್ಲಿ ನೋಡಿದರೂ ಹಣತೆಯ ದೀಪಗಳು ಜಗಮಗಿಸುತ್ತಿದ್ದವು. ಇನ್ನೊಂದೆಡೆ ದೇವಾಲಯದ ಗೋಡೆಗಳ ಮೇಲ್ಭಾಗದಲ್ಲಿ ವಿದ್ಯುತ್ ದೀಪಗಳಿಂದಲೂ ಅಲಂಕರಿಸಲಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿ ನೈಸರ್ಗಿಕ ಪೂರಕವಾದ ಸಿಡಿಮದ್ದುಗಳ ಪ್ರದರ್ಶನ ಕೂಡ ನಡೆದವು. ಒಟ್ಟಾರೆ ಶ್ರೀ ಶೇಡಬರಿ ಕ್ಷೇತ್ರವೇ ದೀಪಗಳ ಬೆಳಕಿನಿಂದ ಪ್ರಜ್ವಲಿಸುತ್ತಿತ್ತು.
ಪ್ರತೀವರ್ಷದಂತೆ ಈ ಬಾರಿಯೂ ಕೂಡ ಸ್ಥಳೀಯ ಯುವಕ ಯುವತಿಯರು ಸೇರಿ ರಚಿಸಿದ್ದ ಕುಂಭಕಳಸದ ಮಾದರಿಯ ಬೃಹತ್ ರಂಗೋಲಿಯು ಬಂದಂತಹ ಎಲ್ಲ ಭಕ್ತಾದಿಗಳನ್ನು ಆಕರ್ಷಿಸುತ್ತಲೇ ಇತ್ತು. ಪ್ರತಿವರ್ಷವೂ ಕೂಡ ಇಂಥ ವಿವಿಧ ಮಾದರಿಯ ಬೃಹತ್ ರಂಗೋಲಿ ರಚನೆ ಇಲ್ಲಿನ ವಿಶೇಷ ಆಕರ್ಷಣೆ ಕೂಡ ಆಗಿದೆ. ರಾತ್ರಿ ಊರಿನ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮುಂಜಾನೆಯವರೆಗೂ ಹಣತೆಗಳು ಬೆಳಗುತ್ತಲೇ ಇದ್ದವು. ದೀಪೋತ್ಸವ ಸಮಿತಿಯವರು ದೀಪಗಳಿಗೆ ಎಣ್ಣೆ ಹಾಕುವ ಮೂಲಕ ಭಕ್ತಿಯಿಂದ ಪಾಲ್ಗೊಂಡರು. ಈ ಎಲ್ಲ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು, ದೀಪೋತ್ಸವ ಸಮಿತಿಯವರು, ಪೂಜಾರಿಗಳು ಹಾಗೂ ಊರಿನ, ಪರ ಊರಿನ ಅನೇಕ ಭಕ್ತಾದಿಗಳು ಹಾಜರಿದ್ದರು.
ಹೆಬಳೆಯ ಶೇಡಬರಿಯಲ್ಲಿ ಕಾರ್ತಿಕ ದೀಪೋತ್ಸವ ಸಂಪನ್ನ
