ಕಾರವಾರ: ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದನ್ನು ನಾವು ಮರೆತು ಬಿಟ್ಟಿದ್ದೇವೆ. ವಯಸ್ಸಾದಾಗ ಬರುವಂತಹ ಕಾಯಿಲೆಗಳು ಈಗ ಎಲ್ಲಾ ವಯೋಮಾನದವರಿಗೂ ಬರುತ್ತಿವೆ. ಆರೋಗ್ಯದ ಕಡೆಗೆ ಕಾಳಜಿ ಇಲ್ಲದೆ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ದೇಹಕ್ಕೆ ದಣಿವಾದಾಗ, ಒತ್ತಡವನ್ನು ನೀಗಿಸಲು ಪ್ರವಾಸಗಳನ್ನು ಹೇಗೆ ಕೈಗೊಳ್ಳುತ್ತವೊ ಹಾಗೇ ನಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಅಷ್ಟೇ ಮುಖ್ಯ ಎಂದು ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಗಾ ಎಂ. ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲೂಕ ಹಾಗೂ ಗ್ರಾಮ ಪಂಚಾಯತ್ ನೌಕರರಿಗೆ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೋಗ ಯಾವುದೇ ಆಗಿರಲಿ ಚಿಕಿತ್ಸೆ ಅವಶ್ಯಕ, ಸಣ್ಣದಾಗಿ ಬಂದ ಜ್ವರ್, ಕೆಮ್ಮು ಇತ್ಯಾದಿಗಳನ್ನು ನಿರ್ಲಕ್ಷ್ಯ ಮಾಡುವುದು ಬಿಟ್ಟು, ಕಾಲ ಕಾಲಕ್ಕೆ ತಪಾಸಣೆ ಮಾಡಿಕಳ್ಳುವುದು ಉತ್ತಮ ಹಾಗೂ ನಮ್ಮ ಮಾನಸಿಕ ಒತ್ತಡಗಳ ಬಗ್ಗೆ ಕಾಳಜಿ ವಹಿಸುವುದು ಪ್ರಮುಖವಾಗಿರುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಶರದ ನಾಯಕ ಮಾತನಾಡಿ, ಈಗಿನ ಕಾಯಿಲೆಗಳು ಪಿತ್ರಾರ್ಜಿತ ಮತ್ತು ಸ್ವಾರ್ಜಿತವಾಗಿರುವ ಕಾಯಿಲೆಗಳಾಗಿವೆ. ಪಿತ್ರಾರ್ಜಿತವೆಂದರೆ ಬಿಪಿ, ಶುಗರ್ ಹಾಗೂ ಸ್ವರ್ಜಿತ ಎಂದರೆ ಎಚ್‌ಐವಿ ಅಂತಹ ಕಾಯಿಲೆಗಳು. ಆದರೆ ಈಗಿನ ದಿನಮಾನಗಳಲ್ಲಿ ಯಾವ ಕಾಯಿಲೆಗಳು ಯಾರಿಗಾದರು ಹೇಗಾದರು ಬರುವ ಸಾಧ್ಯತೆಗಳಿರುತ್ತವೆ. ಕಾಯಿಲೆಗಳ ವಿರುದ್ಧ ಹೊರಾಡುವ ಮನೋಸ್ಥೈರ್ಯ ಮತ್ತು ಮನೋಧೈರ್ಯ ಹೊಂದಿರಬೇಕಾಗುತ್ತದೆ. ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ಮಾತನಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೋಗ ಗುರಿಯಾಗುವ ಸಾಧ್ಯತೆಗಳಿರುತ್ತವೆ. ಮಾನಸಿಕ ಸಮಸ್ಯೆಗಳ ಕುರಿತು ಮಾತನಾಡವುದು ಅದರಿಂದ ಹೊರಬರುವುದರ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಎಂದರು.
ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಅನ್ನಪೂರ್ಣ ಮಾತನಾಡಿ, ಆರೋಗ್ಯ ಕಾಯಿಲೆ ಕುರಿತು ಎಲ್ಲರೂ ಮಾತನಾಡುತ್ತಾರೆ ಆದರೆ ಕುಟುಂಬ ಯೋಜನೆ ಕುರಿತು ಮಾತನಾಡುವುದು ಅತಿ ವಿರಳವಾಗಿದೆ, ಇದರ ಕುರಿತು ತಮ್ಮಲ್ಲಿ ಸಮಸ್ಯೆಗಳು ಅಥವಾ ಕುಟುಂಬ ಯೋಜನೆ ಬಗ್ಗೆ ಅರಿತುಕೊಳ್ಳುವುದು ಅತಿ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತನ ಎಲ್ಲ ಅಧಿಕಾರಿ ವರ್ಗ, ತಾಲೂಕ ಮತ್ತು ಗ್ರಾಮ ಪಂಚಾಯತ್ ನೌಕರರು ಹಾಗೂ ವೈದ್ಯರ ತಂಡ ಶಿಬಿರದಲ್ಲಿ ಇದ್ದರು.