Slide
Slide
Slide
previous arrow
next arrow

ಅಗತ್ಯ ಕಾಮಗಾರಿಗಳಿಗೆ ನರೇಗಾದಡಿ ಬೇಡಿಕೆ ಸಲ್ಲಿಸಿ: ಸದಾನಂದ ನಾಯ್ಕ

300x250 AD

ಅಂಕೋಲಾ: ಗ್ರಾಮದ ಜನರು, ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿರುವ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಶ್ರಮಿಸಲಾಗುತ್ತಿದ್ದು, ಗ್ರಾಮಸ್ಥರು ಅಗತ್ಯ ಕಾಮಗಾರಿಗಳಿಗೆ ಬೇಡಿಕೆ ಸಲ್ಲಿಸಬಹುದು ಎಂದು ಸುಂಕಸಾಳ ಗ್ರಾಮ ಪಂಚಾಯತಿಯ ಅಧ್ಯಕ್ಷ ಸದಾನಂದ ನಾಯ್ಕ ಹೇಳಿದರು.
ತಾಲೂಕಿನ ಸುಂಕಸಾಳ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಮಕ್ಕಳ, ಮಹಿಳೆಯರ ವಿಶೇಷ ಗ್ರಾಮ ಸಭೆ ಹಾಗೂ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ನರೇಗಾದಡಿ ಬೇಡಿಕೆ ಪಟ್ಟಿ ತಯಾರಿಸಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ, ತಾಲೂಕಾ ಪಂಚಾಯತ್‌ನಿ0ದ ಅನೇಕ ಆದೇಶಗಳು ಗ್ರಾಮ ಪಂಚಾಯತ್‌ಗೆ ಬರುತ್ತವೆ. ಅಲ್ಲದೇ ಐಇಸಿ ಸಂಯೋಜಕರು ಹಾಗೂ ಗ್ರಾಪಂ ಸಿಬ್ಬಂದಿ ಯೋಜನೆಯ ಕುರಿತು ಜಾಗೃತಿ ಅಭಿಯಾನ, ತರಬೇತಿ ಕಾರ್ಯಗಾರ ನಡೆಸಿ ಕಾಲ ಕಾಲಕ್ಕೆ ಮಾಹಿತಿಯನ್ನು ನೀಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಜನರು ತಮಗೆ ಬೇಕಾದ ಕಾಮಗಾರಿ ಹಾಗೂ ಕೆಲಸ ಪಡೆಯಲು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿಲ್ಲ. ಹೀಗಾಗಿ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮದಲ್ಲಿ ಸಂಚರಿಸಿ ಸ್ಥಳೀಯರನ್ನು ಮಾತನಾಡಿಸಿ ಸ್ವತಃ ತಾವೇ ಜನರಿಗೆ ಪೂರಕವಾದ ಕಾಮಗಾರಿ ಕೈಗೊಂಡು ಗ್ರಾಮಸ್ಥರಿಗೆ ನರೇಗಾ ಯೋಜನೆಯ ಪ್ರಯೋಜನಗಳನ್ನು ಒದಗಿಸುತ್ತಿದ್ದಾರೆ. ಇನ್ನುಮುಂದೆ ಆದರೂ ಗ್ರಾಮಸ್ಥರು ನರೇಗಾದಡಿ ಲಭ್ಯವಿರುವ ಅಗತ್ಯ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಮತ್ತು ಕೂಲಿ ಕೆಲಸಕ್ಕಾಗಿ ಗ್ರಾಮ ಪಂಚಾಯತಿಗೆ ಫಾರ್ಮ್ ನಂ 6ರಲ್ಲಿ ಅರ್ಜಿ ಸಲ್ಲಿಸುವ ಮೂಲಕ ಆರ್ಥಿಕ, ಸಾಮಾಜಿಕವಾಗಿ ವೃದ್ಧಿಯಾಗಬೇಕು ಎಂದರು.
ಮಹಿಳೆಯರು ಮಕ್ಕಳ ಹಿತದೃಷ್ಟಿಯಿಂದ ಗ್ರಾಮ ಪಂಚಾಯತಿ ಹಂತದಲ್ಲಿ ಹಲವು ಯೋಜನೆ ರೂಪಿಸಿದ್ದು, ಆದ್ಯತೆ ಮೇರೆಗೆ ಕೆಲಸ ಕಾರ್ಯ ನಿರ್ವಹಿಸಲಾಗುತ್ತಿದೆ. ಇಂದಿನ ಮಕ್ಕಳ ಹಾಗೂ ಮಹಿಳಾ ಗ್ರಾಮ ಸಭೆಯಲ್ಲಿ ಸಲ್ಲಿಕೆಯಾದ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜ ಹೆಗಡೆ ಮಾತನಾಡಿ, ಹಳ್ಳಿಗಳ ಏಳಿಗೆಗೆ ನರೇಗಾ ಯೋಜನೆ ತುಂಬಾ ಸಹಕಾರಿಯಾಗಿದ್ದು, ನರೇಗಾದಡಿ ಶಾಲಾ ಸಮಗ್ರ ಅಭಿವೃದ್ಧಿ, ಪೌಷ್ಟಿಕ ಕೈತೋಟ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಿಗೆ ಅವಕಾಶವಿದೆ. ಆದರೆ ಅಂಗನವಾಡಿ ಕಾಂಪೌ0ಡ್ ನಿರ್ಮಾಣಕ್ಕೆ ಅವಕಾಶವಿಲ್ಲ. ಅಂಗನವಾಡಿ ಕೇಂದ್ರದಲ್ಲಿ ಚಿಕ್ಕ ಮಕ್ಕಳಿರುವುದರಿಂದ ಪೌಷ್ಟಿಕ ಕೈತೋಟ ಮತ್ತು ಮಕ್ಕಳ ಸಂರಕ್ಷಣೆಗೆ ಪ್ರಮುಖವಾಗಿ ಕಾಂಪೌ0ಡ್ ಅವಶ್ಯವಿದ್ದು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಜಿಲ್ಲಾ ಹಾಗೂ ತಾಲೂಕ ಪಂಚಾಯತ್ ಅಂಗನವಾಡಿ ಕಾಂಪೌ0ಡ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಗಿರೀಶ್ ನಾಯ್ಕ್ ಮಾತನಾಡಿ, ಕೋವಿಡ್ ಸಂದರ್ಭದಿ0ದ ಮಕ್ಕಳು ಆಕಸ್ಮಿಕ ಹಾಗೂ ಅನಿವಾರ್ಯವಾಗಿ ಮೊಬೈಲ್ ಬಳಸುತ್ತಿದ್ದು, ಶೈಕ್ಷಣಿಕ ಪ್ರಗತಿ, ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಿಕೊಳ್ಳುವಂತಹ ಉತ್ತಮ ಕಾರ್ಯದತ್ತ ಹೆಚ್ಚು ಗಮನಹರಿಸಬೇಕು ಎಂದರು.
ತಾಲೂಕಾ ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗ್ರಾಮದ ಮಹಿಳೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವ-ಸಂಘದ ಸದಸ್ಯರಿಗೆ ಹಾಗೂ ಶಾಲಾ ಶಿಕ್ಷಕರು, ಮಕ್ಕಳನ್ನ ಉದ್ದೇಶಿಸಿ ಮಾತನಾಡಿದರು. ಸರಕಾರಿ ಪ್ರೌಢಶಾಲಾ ಶಿಕ್ಷಕ ಮೋಹನ್ ನಾಯ್ಕ ಅವರು ಮಕ್ಕಳ ವಿಶೇಷ ಗ್ರಾಮ ಸಭೆ ಅಂಗವಾಗಿ ಮಕ್ಕಳ ಹಕ್ಕು, ಕರ್ತವ್ಯ, ಜವಬ್ದಾರಿ ಕುರಿತು ಉಪನ್ಯಾಸ ನೀಡಿದರು. ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ನಾಯ್ಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರಭಾ ಗೌಡ ವಹಿಸಿದ್ದರು. ಇದೇವೆಳೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು ನರೇಗಾದಡಿ ಕೈಗೊಳ್ಳುವ ಪೌಷ್ಟಿಕ ಕೈತೋಟ, ಕಾಲು ಸಂಕ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ ಗ್ರಾಮ ಪಂಚಾಯತಿಗೆ ಬೇಡಿಕೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಪ್ರವೀಣ್ ನಾಯರ್, ಸುಜಾತ ಆಗೇರ, ಸಿಡಿಪಿಒ ಕಛೇರಿಯ ಮೇಲ್ವಿಚಾರಕರಾದ ಗೌರಿ ಮಾರ್ಕಂಡೆ, ಸಿಹೆಚ್‌ಒ ಆಶಾ ಸಿದ್ದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಗಿರೀಶ್ ನಾಯ್ಕ್ , ತಾಂತ್ರಿಕ ಸಹಾಯಕ ಇಂಜನೀಯರ್ ರಾಜೇಶ್ ಮಡಿವಾಳ, ಡಿಇಒ ಗೀತಾ ನಾಯ್ಕ, ಸಿಬ್ಬಂದಿ ಪ್ರದೀಪ್ ಶಟ್ಟಿ, ಕಮಲಾಕರ ಗುನಗಾ, ವಿನಾಯಕ ಶೆಟ್ಟಿ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಹಾಗೂ ಆರೋಗ್ಯ ಇಲಾಖೆ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top