ಕಾರವಾರ: ಕೆಲ ದಿನಗಳ ಹಿಂದೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿತ್ತು ಜನರ ವಿರೋಧ ವ್ಯಕ್ತವಾಗಿತ್ತು.
ಕೆಲ ದಿನಗಳಿಂದ ಗೋಕರ್ಣದ ರಥ ಬೀದಿಯಿಂದ ದೇವಸ್ಥಾನದವರಗೆ ಅರೆಬರೆ ಬಟ್ಟೆ ಹಾಕುವಂತಿಲ್ಲ ಎಂಬ ಸೂಚನಾ ಫಲಕವನ್ನು ಆಡಳಿತ ಮಂಡಳಿ ಅಳವಡಿಕೆ ಮಾಡಿತ್ತು. ಆದರೆ ಗೋಕರ್ಣ ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಆ ಸೂಚನಾ ಫಲಕವನ್ನು ಆಡಳಿತ ಮಂಡಳಿ ತೆರವು ಮಾಡಿತ್ತು. ಈಗ ನಗರದ ಮಾರಿಕಾಂಬಾ ದೇವಸ್ಥಾನಕ್ಕೂ ವಸ್ತ್ರ ಸಂಹಿತ ನೀತಿ ಕಾಲಿಟ್ಟಿದೆ.
ಜಿಲ್ಲೆಯ ಐತಿಹಾಸಿಕ ಮಾರಿಕಾಂಬಾ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಹಿಂದೂ ಜನ ಜಾಗೃತಿ ಸಮಿತಿಯಿಂದ ಮನವಿ ಮಾಡಲಾಗಿದೆ. ಹಿಂದೂ ಸಂಸ್ಕೃತಿ ಪ್ರಕಾರ ಉಡುಪು ಧರಿಸಿ ದೇವಸ್ಥಾನಕ್ಕೆ ಬರುವುದಕ್ಕೆ ಮಾತ್ರ ಅವಕಾಶ ನೀಡುವಂತೆ ಒತ್ತಾಯಿಸಲಾಗಿದೆ.
ಅರೆಬರೆ ಬಟ್ಟೆ ಧರಿಸಿ ದೇವಸ್ಥಾನದ ಒಳಗೆ ಬರುವುದಕ್ಕೆ ಅವಕಾಶ ಬೇಡ, ಈ ರೀತಿಯಾಗಿ ಬಟ್ಟೆ ಧರಿಸಿ ಬರುವುದರಿಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ ಎಂದು ಆರೋಪಿಸಲಾಗಿದೆ.
ರಾಜ್ಯದ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲು ಧಾರ್ಮಿಕ ಪರಿಷತ್ ತೀರ್ಮಾನಿಸಿದ್ದು, ಬರ್ಮುಡಾ, ತುಂಡುಡುಗೆಗಳನ್ನು ನಿಷೇಧಿಸಲಾಗಿದೆ. ಎ ಗ್ರೇಡ್ ದೇವಾಲಯಗಳಲ್ಲಿ ಹಂತಹಂತವಾಗಿ ವಸ್ತ್ರ ಸಂಹಿತೆ ಜಾರಿ ಮಾಡಲಾಗುತ್ತಿದೆ.
ಕರಾವಳಿ ಭಾಗದಲ್ಲಿ ಮತ್ತೆ ಶುರುವಾದ ವ್ಯಾಪಾರ ಬಹಿಷ್ಕಾರ ದಂಗಲ್
ಇನ್ನು ಕರಾವಳಿ ಭಾಗದಲ್ಲಿ ಮತ್ತೆ ವ್ಯಾಪಾರ ಬಹಿಷ್ಕಾರ ದಂಗಲ್ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಿಂದೂ ಜಾಗರಣಾ ವೇದಿಕೆಯಿಂದ ಚಂಪಾಷಷ್ಟಿಗೆ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿಷೇಧ ಎಂಬ ಬ್ಯಾನರ್ ಅಳವಡಿಸಲಾಗಿದೆ.