ಕಾರವಾರ: ಪ್ರತಿನಿತ್ಯ ಸಂಗ್ರಹ ಮಾಡುವ ತ್ಯಾಜ್ಯ ವಸ್ತುಗಳನ್ನ ಬಳಸಿಕೊಂಡು ಕಲಾಕೃತಿಗಳನ್ನ ಮಾಡುವ ಮೂಲಕ ಜನರಲ್ಲಿ ಅನುಪಯುಕ್ತ ವಸ್ತುಗಳನ್ನ ಬಳಕೆ ಮಾಡಿಕೊಳ್ಳಬಹುದು ಎನ್ನುವ ಜಾಗೃತಿ ಮೂಡಿಸಲು ಕಾರವಾರ ನಗರಸಭೆ ಹೊಸ ಪ್ರಯತ್ನಕ್ಕೆ ಇಳಿದಿದೆ.
ನಗರದಲ್ಲಿ ಪ್ರತಿನಿತ್ಯ ತ್ಯಾಜ್ಯವನ್ನ ಸಂಗ್ರಹಿಸಲಾಗುತ್ತಿದ್ದು, ನಗರಸಭೆ ಸಿಬ್ಬಂದಿಗಳು ಸಂಗ್ರಹಿಸಿದ ತ್ಯಾಜ್ಯದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಗೃಹ ಬಳಕೆಯಿಂದ ಬರುವ ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿಕೊಂಡು ವಿವಿಧ ರೀತಿಯ ಕಲಾಕೃತಿ ಹಾಗೂ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ನಗರಸಭೆ ಆವರಣದಲ್ಲಿ ಇಟ್ಟಿದ್ದು ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಭಾರತ ಸರಕಾರದ ನಿರ್ದೇಶನದಂತೆ ಕೇಂದ್ರ ನಗರೊತ್ಥಾನ ಯೋಜನೆಯಡಿ ದೇಶದ ನಗರಸಭೆಗಳಿಗೆ ಟೈಕೋತಾನ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಹಿನ್ನೆಯಲ್ಲಿ ಕಸದಿಂದ ರಸ ಎನ್ನುವಂತೆ ನಿರುಪಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿಕೊಂಡು ವಿವಿಧ ರೀತಿಯ ವಸ್ತುಗಳನ್ನು ತಯಾರಿಸಲಾಗಿದೆ. ನಿತ್ಯ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯಗಳಾದ ಬಾಟಲ್, ಬಾಟೆಲ್ ಮುಚ್ಚಳ, ಚಮಚ, ಪೈಪ್, ಟಾಯರ್, ಆಯಲ್ ಕ್ಯಾನ್, ರಟ್ಟು, ಪ್ಲಾಸ್ಟಿಕ್ ಲೋಟ ಹಾಗೂ ದಾರವನ್ನು ಬಳಸಲಾಗಿದೆ. ಇವುಗಳಿಂದ ಹೂವಿನ ಕುಂಡ, ಕುರ್ಚಿ, ಹ್ಯಾಂಗಿಂಗ್ ಪಾಟ್, ಕಸದ ತೊಟ್ಟಿ ಸೇರಿದಂತೆ ಅನೇಕ ಗೃಹ ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗಿದೆ.
ತಯಾರಿಸಿದ ಕಲಾಕೃತಿಗಳನ್ನ ನಗರಸಭೆಯಲ್ಲಿ ಇಟ್ಟಿದ್ದು ಸಾರ್ವಜನಿಕರು ಇದನ್ನ ನೋಡಿಕೊಂಡು ಮನೆಯಲ್ಲಿರುವ ತ್ಯಾಜ್ಯದಲ್ಲಿ ಕಲಾಕೃತಿ ಮಾಡಿಕೊಳ್ಳಲು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಆರ್ ಪಿ ನಾಯ್ಕ ಮಾಹಿತಿ ನೀಡಿದ್ದಾರೆ. ಇದಲ್ಲದೇ ಸಾರ್ವಜನಿಕರ ಜೊತೆ ಶಾಲಾ ಮಕ್ಕಳಲ್ಲಿ ತ್ಯಾಜ್ಯಗಳ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಇವುಗಳನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂದಿದ್ದಾರೆ.
ತ್ಯಾಜ್ಯ ವಸ್ತುಗಳನ್ನ ಸಹ ಬಳಕೆ ಮಾಡಿಕೊಂಡು ಸುಂದರ ಕಲಾಕೃತಿಗಳನ್ನ ಮಾಡಬಹುದು ಎಂದು ನಗರಸಭೆ ಸಿಬ್ಬಂದಿಗಳು ತೋರಿಸಿಕೊಟ್ಟಿದ್ದಾರೆ. ಇದರಿಂದ ಸಾರ್ವಜನಿಕರು ಜಾಗೃತರಾಗಿ ಮನೆಯಲ್ಲಿಯೇ ತಾವು ಬಳಸಿದ ವಸ್ತು ಬಳಸಿಕೊಂಡು ಬಿಡುವಿನ ವೇಳೆ ಕಲಾಕೃತಿಗಳನ್ನ ಕಡಿಮೆ ವೆಚ್ಚದಲ್ಲಿ ರಚಿಸಿಕೊಳ್ಳಬಹುದಾಗಿದ್ದು ಕಡಿಮೆ ಬೆಲೆಯಲ್ಲಿ ಮನೆಯನ್ನ ಸುಂದರವಾಗಿ ಇಟ್ಟುಕೊಳ್ಳಲು ಇದು ಸಹಕಾರಿಯಾಗಲಿದೆ.
• ಆರ್.ಪಿ.ನಾಯ್ಕ, ಪೌರಾಯುಕ್ತ