ಭಟ್ಕಳ: ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅಂತ್ಯವಾಗಲು ಇನ್ನೆಷ್ಟು ತಿಂಗಳು, ವರ್ಷ ಬೇಕೋ ಯಾರಿಗೂ ಗೊತ್ತಿಲ್ಲ. ಆದರೆ ಅಪೂರ್ಣ ಕಾಮಗಾರಿಯಿಂದಾಗಿ ಹೆದ್ದಾರಿ ಪ್ರಯಾಣ, ಓಡಾಟ ಹಳಿ ತಪ್ಪಿ ಹೋಗಿದ್ದು, ಇದೀಗ ಅಪಾಯವನ್ನು ತಪ್ಪಿಸಲು ಬ್ಯಾರಿಕೇಡ್, ದ್ವಿಭಜಕಗಳನ್ನ ಅಳವಡಿಸುವ ನಿಟ್ಟಿನಲ್ಲಿ ಸ್ವತಃ ಪೊಲೀಸರೇ ಕಾರ್ಮಿಕರಾಗಿ ರಸ್ತೆಗೆ ಇಳಿಯುವ ಪರಿಸ್ಥಿತಿ ಎದುರಾಗಿದೆ.
ರಾತ್ರಿ ನಗರ ಠಾಣಾ ಸಿಪಿಐ ದಿವಾಕರ ನೇತೃತ್ವದಲ್ಲಿ ಸಂಶುದ್ದೀನ್ ಸರ್ಕಲ್ ಇಕ್ಕೆಲಗಳಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸರು, ದ್ವಿಭಜಕ ಹಾಗೂ ಬ್ಯಾರಿಕೇಡ್ ವ್ಯವಸ್ಥೆ ಅಳವಡಿಸುವ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡುಬಂದಿದೆ. ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯಿಂದಾಗಿ ಸರಿಯಾದ ಸಿಗ್ನಲ್ ವ್ಯವಸ್ಥೆ ಇಲ್ಲದೇ ಹೆದ್ದಾರಿ ದಾಟಲು ಸಾರ್ವಜನಿಕರು ಪರಿತಪಿಸುತ್ತಿರುವುದನ್ನು ಅರಿತ ಪೊಲೀಸರು, ಪಾದಾಚಾರಿಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಒಂದೆರಡು ದಿನಗಳ ಒಳಗಾಗಿ ಸಂಶುದ್ದೀನ್ ಸರ್ಕಲ್‌ನಲ್ಲಿ ಸಿಗ್ನಲ್ ವ್ಯವಸ್ಥೆ ಅನುಷ್ಠಾನಗೊಳ್ಳಲಿದ್ದು, ಇನ್ನುಮುಂದೆ ವೇಗದ ವಾಹನ ಸಂಚಾರಕ್ಕೆ ಸರ್ಕಲ್‌ನಲ್ಲಿ ತಡೆ ಬೀಳಲಿದೆ. ಸಿಪಿಐ ದಿವಾಕರ ಮಾರ್ಗದರ್ಶನದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಪೊಲೀಸರು ನಡೆಸುತ್ತಿರುವ ಪ್ರಯತ್ನಕ್ಕೆ ಸಾರ್ವಜನಿಕ ವಲಯ ದಿಂದ ಶ್ಲಾಘನೆ ವ್ಯಕ್ತವಾಗಿದೆ.
ಇತ್ತೀಚಿಗಷ್ಟೇ ಸಂಶುದ್ದೀನ್ ಸರ್ಕಲ್ ಸಮೀಪ ಬಾಲಕಿಯೋರ್ವಳು ಕಾರು ಬಡಿದು ಕೆಳಕ್ಕೆ ಬಿದ್ದು, ನಂತರ ಮೈ ಮೇಲೆ ಲಾರಿ ಹರಿದು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಕೋಟ್…
ಹೆದ್ದಾರಿ ಅಗಲೀಕರಣ ಕಾಮಗಾರಿ ಮುಗಿದ ನಂತರ ಸಂಚಾರ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದೆವು. ಸರ್ಕಲ್‌ನಲ್ಲಿ ಸಿಗ್ನಲ್ ಅಳವಡಿಸುವ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡು ಕಾಯುತ್ತಿದ್ದೆವು. ಆದರೆ ಕಾಮಗಾರಿ ಮುಗಿಯುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ತಡ ಮಾಡುವುದು ಬೇಡ ಎಂಬ ಕಾರಣಕ್ಕೆ ಈಗಲೇ ಅನುಷ್ಠಾನಕ್ಕೆ ಇಳಿದಿದ್ದೇವೆ. ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡಿದ್ದಾರೆ.
• ದಿವಾಕರ, ಸಿಪಿಐ