ದಾಂಡೇಲಿ: ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾಧನಾ ಮೆಲೋಡಿಸ್ ಆಶ್ರಯದಲ್ಲಿ ಗಾಯಕ ಹಾಗೂ ಹಳ್ಳಿಹೈದ ಮಹಾಂತೇಶ ಅಂದಾಕಾರ ಹಾಡಿದ ಪರಿಸರ ಗೀತೆ ವಿಡಿಯೋ ಬಿಡುಗಡೆ ಸಮಾರಂಭವು ಜರುಗಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಕಲಾಪ್ರತಿಭೆಗಳು ಸೇರಿ ನಡೆಸುತ್ತಿರುವ ಸಾಧನಾ ಮೆಲೋಡಿಸ್ ಸಂಸ್ಥೆಯ ಕಲಾಸೇವೆ ಸ್ಮರಣೀಯ. ಗ್ರಾಮೀಣ ಭಾಗದ ಗಾಯಕರುಗಳನ್ನು ಕೂಡಿಕೊಂಡು ಕನ್ನಡ ಕಟ್ಟುವುದರ ಜೊತೆಗೆ ಕಲಾ ಸೇವೆ ಮಾಡುತ್ತಿರುವುದು ಅಭಿನಂದನೀಯ ಎಂದರು.
ವೈದ್ಯರೂ, ಕವಿಗಳೂ ಆದ ಡಾ. ಶ್ರೀಶೈಲ್ ಮಾದಣ್ಣನವರ, ಕಲೆ, ಸಾಹಿತ್ಯಕ್ಕೆ ಸಮಾಜವನ್ನು ಸಂಘಟಿಸುವ ಮತ್ತು ಸದೃಢಗೊಳಿಸುವ ಶಕ್ತಿಯಿದೆ. ಕವಿತೆ ಸಮಾಜಕ್ಕೆ ಸಂದೇಶವನ್ನು ನೀಡಿದರೆ, ಗಾಯನ ಸಮಾಜವನ್ನು ಜಾಗೃತಗೊಳಿಸುತ್ತದೆ ಎಂದರು.
ವಲಯಾರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ ಮಾತನಾಡಿ, ಸಮೃದ್ಧ ಪರಿಸರದ ನಡುವೆ ಇರುವ ದಾಂಡೇಲಿಯಲ್ಲಿ ಪರಿಸರ ಗೀತೆಯ ವಿಡಿಯೋ ಬಿಡುಗಡೆಯಾಗುತ್ತಿರುವುದು ಅತ್ಯಂತ ಸಂತಸದ ಸಂಗತಿ. ಇದೊಂದು ಕಲೆ, ಸಾಹಿತ್ಯ ಸೇವೆಯ ಜೊತೆಗೆ ಪರಿಸರ ಸಂರಕ್ಷಣೆಯ ಜಾಗೃತಿ ಕಾರ್ಯವೂ ಆಗಿದೆ ಎಂದು ಅಭಿಪ್ರಾಯಿಸಿದರು.
ಶ್ರೀಮೃತ್ಯುಂಜಯ ಮಠದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪತ್ರಕರ್ತ ಸಂದೇಶ್ ಎಸ್.ಜೈನ್, ಗ್ರಾ.ಪಂ. ಸದಸ್ಯ ಮುರಳೀಧರ ಗೌಡ, ಪ್ರಮುಖರಾದ ಮಂಜುಳಾ ನಾಕಾಡೆ, ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ಪ್ರವೀಣ್ ಕಪೂರ್ ಮತ್ತು ಗಾಯಕ ಎಸ್.ಚಂದ್ರಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರಿಗೆ ಹಾಗೂ ಪರಿಸರ ಗೀತೆಯ ರೂವಾರಿ ಮಹಾಂತೇಶ ಅಂದಾಕಾರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸಾಧನಾ ಮೆಲೋಡಿಸ್ ಬಳಗದ ಕಾರ್ಯದರ್ಶಿ ರಘುವೀರ್ ಗೌಡ ಸ್ವಾಗತಿಸಿದ ಕಾರ್ಯಕ್ರಮಕ್ಕೆ ತಂಡದ ಪ್ರಮುಖ ಗಿರೀಶ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಧನಾ ಮೆಲೋಡಿಸ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.