ಕಾರವಾರ: ಸಮಾಜದಲ್ಲಿ ಪ್ಲಾಸ್ಟಿಕ್, ಹಸಿ ಕಸ ಹಾಗೂ ವಾಯು ಮಾಲಿನ್ಯದಿಂದ ಸೃಷ್ಟಿಯಾಗುತ್ತಿರುವ ಅನೈರ್ಮಲ್ಯದಿಂದ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ವಾಂತಿ- ಬೇಧಿ ಕಾಯಿಲೆ ಉಲ್ಬಣಗೊಳ್ಳುತ್ತಿರುವ ಕಾರಣ ಪ್ರತಿಯೊಬ್ಬ ನಾಗರಿಕರು ಮನೆ ಸುತ್ತಲಿನ ವಾತಾವರಣ ಮತ್ತು ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅಭಿಪ್ರಾಯಪಟ್ಟರು.
ತಾಲೂಕಿನ ಅಮದಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಜಿಲ್ಲಾ, ತಾಲೂಕಾ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಸ್ವಚ್ಚತಾ ಓಟ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ, ತಾಲೂಕಾ ಹಾಗೂ ಗ್ರಾಮ ಪಂಚಾಯತಿಯಿಂದ ಮಾಡಲಾಗುತ್ತಿರುವ ಕಸ ಸಂಗ್ರಹಣೆ, ವಿಂಗಣೆ ಹಾಗೂ ವಿಲೇವಾರಿ ಕಾರ್ಯಕ್ಕೆ ಜನರು ಸಹಕರಿಸಬೇಕು. ಜೊತೆಗೆ ಕಸವನ್ನು ಬೇರ್ಪಡಿಸಿ ಕಸದ ವಾಹನಗಳಿಗೆ ನೀಡಬೇಕು. ಹಾಗೇ ನರೇಗಾ ಹಾಗೂ ಎಸ್‌ಬಿಎಂ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಶೌಚಾಲಯ, ಶಾಲಾ ಶೌಚಾಲಯ ನಿರ್ಮಾಣಕ್ಕೆ ಅವಕಾಶವಿದ್ದು, ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಆ ಮೂಲಕ ಸ್ವಚ್ಛ ಪರಿಸರ, ಸಮೃದ್ಧ ಜೀವನಕ್ಕೆ ಪಣ ತೊಡಬೇಕು ಎಂದು ತಿಳಿಸಿದರು.
ಅಮದಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆಶಾ ನಾಯ್ಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಲು ಸರಕಾರ ವಿವಿಧ ಯೋಜನೆಗಳ ಮೂಲಕ ಮುಂದಾಗಿದೆ. ಜನರು ಯೋಜನೆಯ ಉಪಯೋಗ ಪಡೆದು ತಮ್ಮ ಮುಂದಿನ ಭವಿಷ್ಯ ವೃದ್ಧಿಗಾಗಿ ಉತ್ತಮ ರೀತಿಯ ಕಸ ನಿರ್ವಣೆಗೆ ಕೈಜೋಡಿಸಬೇಕು ಎಂದರು.
ಇದೇವೇಳೆ ಸ್ವಚ್ಚತಾ ಓಟದಲ್ಲಿ ಪಾಲ್ಗೊಂಡು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ಶಾಲಾ ಮಕ್ಕಳು, ಗ್ರಾಮಸ್ಥರಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರವಿ ದುರ್ಗೇಕರ, ಸದಸ್ಯರಾದ ಪುರುಷೋತ್ತಮ ಗೌಡ, ಪ್ರಕಾಶ ಪಡ್ತಿ, ದತ್ತಾತ್ರೇಯ ಗೌಡ, ವಿನಾಯಕ ನಾಯ್ಕ, ರಾಜೇಶ್ ಮಡಿವಾಳ, ಚಂದ್ರಕಾAತ ನಾಯ್ಕ, ಕಲ್ಪಿತಾ ಆಗೇರ, ಭಾರತಿ ಗೌಡ, ರೂಪಿನಾ ಡಯಾಸ, ಜಿಲ್ಲಾ ಪಂಚಾಯತ್‌ನ ಆಡಳಿತ ಶಾಖೆಯ ನಾಗೇಶ್ ರಾಯ್ಕರ, ಕಾರವಾರ ತಾಲೂಕು ಪಂಚಾಯತ್‌ನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಬಾಲಪ್ಪನವರ ಆನಂದಕುಮಾರ, ಪಿಡಿಒ ನಾಗೇಂದ್ರ ನಾಯ್ಕ, ಸ್ವಚ್ಛ ಭಾರತ್ ಮಿಷನ್‌ನ ಜಿಲ್ಲಾ ಸಮಾಲೋಚಕ ಸೂರ್ಯನಾರಾಯಣ ಭಟ್, ತಾಲೂಕ ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಸೇರಿದಂತೆ ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕೋಟ್…
ಪ್ರತಿದಿನ ಪರಿಸರದಲ್ಲಿ ನಾಗರಿಕರು ಎಲ್ಲೆಂದರಲ್ಲಿ ಹಸಿ, ಒಣ ಹಾಗೂ ಪ್ಲಾಸ್ಟಿಕ್ ಕಸ ಎಸೆಯುವುದರಿಂದ ನೀರು, ಮಣ್ಣು ಹಾಗೂ ವಾತಾವರಣದಲ್ಲಿ ಅನೈರ್ಮಲ್ಯ ಉಂಟಾಗುತ್ತಿದೆ. ಪ್ರತಿಯೊಬ್ಬರೂ ಸ್ವಚ್ಚತೆಯ ಬಗ್ಗೆ ತಿಳಿದುಕೊಂಡು ತಮ್ಮ ಮನೆ ಹಾಗೂ ಸುತ್ತಮುತ್ತಲಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.
• ಪ್ರಿಯಾಂಗಾ, ಸಿಇಒ