ಕಾರವಾರ: ಮಾಧ್ಯಮಗಳು ಸುದ್ದಿಗಳನ್ನ ಬಿತ್ತರಿಸದೇ ಇದ್ದರೆ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಮ್ಮ ಅರಿವಿಗೆ ಬರುವುದಿಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ನಗರದ ಗುರುಭವನದಲ್ಲಿ ನಡೆದ ವಿಸ್ತಾರ ಕನ್ನಡ ಸಂಭ್ರಮ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲಿ ಇಂದು ಎಲ್ಲ ಕ್ಷೇತ್ರಗಳೂ ಸ್ಪರ್ಧಾತ್ಮಕವಾಗಿವೆ. ಮಾಧ್ಯಮಗಳೂ ಕೂಡಾ ಇನ್ನೊಬ್ಬರಿಗಿಂತ ತಾನು ಮೊದಲು ಸುದ್ದಿಯನ್ನು ಕೊಡಬೇಕು ಎನ್ನುವ ಸ್ಪರ್ಧೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಧ್ಯಮಗಳನ್ನ ನಡೆಸುವುದು ಸುಲಭದ ಮಾತಲ್ಲ ಎಂದರು.
ಮಾಧ್ಯಮಗಳು ಗ್ರಾಮೀಣ ಭಾಗಗಳಲ್ಲಿನ ಸಮಸ್ಯೆಗಳ ಕುರಿತು ವರದಿ ಮಾಡುವುದರ ಜೊತೆಗೆ ಸರ್ಕಾರದ ಯೋಜನೆಗಳ ಕುರಿತು ಗ್ರಾಮೀಣ ಮಟ್ಟದಲ್ಲಿ ಜನರಿಗೆ ತಿಳಿಸುವಂತಹ ಕಾರ್ಯಕ್ರಮಗಳನ್ನ ಮಾಡಬೇಕು. ಅಲ್ಲದೇ ಭ್ರಷ್ಟಾಚಾರದ ಕುರಿತು ಸತ್ಯಾಸತ್ಯತೆಯನ್ನ ಬಯಲಿಗೆ ಎಳೆಯುವಂತಹ ಕಾರ್ಯವನ್ನ ಮುಂದಿನ ದಿನಗಳಲ್ಲಿ ಎಲ್ಲಾ ಮಾಧ್ಯಮಗಳೂ ಮಾಡಲಿ. ನೂತನವಾಗಿ ಪ್ರಾರಂಭವಾಗಿರುವ ವಿಸ್ತಾರ ನ್ಯೂಸ್ ರಾಜ್ಯ, ರಾಷ್ಟ್ರಮಟ್ಟದಲ್ಲೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶಾಸಕಿ ರೂಪಾಲಿ ನಾಯ್ಕ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಾ ನಾಯ್ಕ ಮಾತನಾಡಿ, ಇದೀಗ ಎಲ್ಲೆಲ್ಲೂ ವಿದ್ಯುನ್ಮಾನ ಮಾದ್ಯಮಗಳು ವಿಜೃಂಭಿಸುತ್ತಿದ್ದು, ಮುದ್ರಣ ಮಾಧ್ಯಮ ಮುದುಡಿ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ನೂತನ ಮಾದ್ಯಮವಾಗಿ ಪ್ರವೇಶಿಸುತ್ತಿರುವ ವಿಸ್ತಾರ ನ್ಯೂಸ್ ಪ್ರಜಾಪ್ರಭುತ್ವದ ನಾಲ್ಕನೇಯ ಸ್ತಂಭವಾಗಿ ಪ್ರಜೆಗಳ ಆಶೋತ್ತರಗಳನ್ನ ಎತ್ತಿ ಹಿಡಿಯುವ ಗುರುತರ ಜವಾಬ್ದಾರಿಯನ್ನ ನಿಭಾಯಿಸಬೇಕಿದೆ ಎಂದರು.
ಸೇ0ಟ್ ಮಿಲಾಗ್ರಿಸ್ ಸೌಹಾರ್ದ ಕೋ- ಆಪರೇಟಿವ್ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕ ಜಾರ್ಜ್ ಫರ್ನಾಂಡೀಸ್ ಮಾತನಾಡಿ, ನಮ್ಮ ಜಿಲ್ಲೆಯ ಯಲ್ಲಾಪುರದವರಾದ, ರಾಜ್ಯದೆಲ್ಲೆಡೆ ಪ್ರಖ್ಯಾತಿಯನ್ನ ಹೊಂದಿರುವ ಹರಿಪ್ರಕಾಶ್ ಕೋಣೆಮನೆ ಅವರು ವಿಸ್ತಾರ ನ್ಯೂಸ್‌ನ ಮುಂದಾಳತ್ವವನ್ನ ವಹಿಸಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ವಿಸ್ತಾರ ನ್ಯೂಸ್ ಜಿಲ್ಲೆಯ ಜನರ ಮನೆ, ಮನಗಳಿಗೆ ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.
ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ್, ರಾಜ್ಯದ ಬಹುತೇಕ ಸುದ್ದಿ ವಾಹಿನಿಗಳಲ್ಲಿ ನಮ್ಮ ಉತ್ತರಕನ್ನಡ ಜಿಲ್ಲೆಯವರ ಪ್ರಾಬಲ್ಯ ಸಾಕಷ್ಟಿದೆ. ವಿಶ್ವೇಶ್ವರ ಭಟ್, ರವಿ ಹೆಗಡೆ, ಶಶಿಧರ ಭಟ್ ಸೇರಿದಂತೆ ಇನ್ನೂ ಹಲವರು ವಿವಿಧ ಸುದ್ದಿ ಮಾಧ್ಯಮಗಳ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದು, ಅವುಗಳ ಮಾಲಕರು ಮಾತ್ರ ಬೇರೆ ಇರುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ನಮ್ಮ ಜಿಲ್ಲೆಯವರೇ ಮಾದ್ಯಮವೊಂದರ ಮಾಲಕರು ಹಾಗೂ ಮುಖ್ಯಸ್ಥರೂ ಆಗಿರುವ ಚಾನೆಲ್ ವಿಸ್ತಾರ ನ್ಯೂಸ್ ಆಗಿದೆ, ಇದರೊಂದಿಗೆ ಪತ್ರಿಕೆಯಂತೆ ಡಿಜಿಟಲ್ ರೂಪದಲ್ಲಿ ವೆಬ್‌ನ್ನು ಸಹ ವಿಸ್ತಾರ ನ್ಯೂಸ್ ಹೊಂದಿದ್ದು ಅದರ ಮುಖ್ಯಸ್ಥರಾಗಿರುವ ರಮೇಶಕುಮಾರ ನಾಯ್ಕ ಅವರು ಸಹ ನಮ್ಮ ಜಿಲ್ಲೆಯ ಹೊನ್ನಾವರದವರೇ ಆಗಿದ್ದಾರೆ. ಹೀಗಾಗಿ ಇದು ನಮ್ಮ ಜಿಲ್ಲೆಯ ಚಾನೆಲ್ ಎಂದು ನಾವು ಹೆಮ್ಮೆಯಿಂದ ಹೇಳಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆಯ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಮಾಧ್ಯಮಗಳು ಸಮಾಜದ ವೈದ್ಯಕೀಯ ಪದ್ಧತಿಯಿದ್ದಂತೆ. ಸಮಾಜದ ಕುಂದು- ಕೊರತೆಗಳನ್ನ ಸರಿಪಡಿಸಿ, ಸುಧಾರಣೆಗಳನ್ನ ತರುವಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯವಾದದ್ದು. ಈ ನಿಟ್ಟಿನಲ್ಲಿ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳು ಸತ್ಯದ ಪರವಾಗಿರಲಿ ಎಂದು ಸಲಹೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕಾರವಾರದ ಕಲ್ಪನಾರಶ್ಮಿ ಕಲಾಲೋಕ ಹಾಗೂ ಸ್ಥಳೀಯ ನೃತ್ಯ ತಂಡದವರಿAದ ನಾಡಿನ ಇತಿಹಾಸ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನೃತ್ಯ ತಂಡಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿಪತ್ರವನ್ನು ವಿತರಿಸಲಾಯಿತು. ಶ್ರೀಮಾಯಿ ನಾಯ್ಕ ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿಸ್ತಾರ ನ್ಯೂಸ್ ಜಿಲ್ಲಾ ವರದಿಗಾರ ಸಂದೀಪ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಮೆರಾಮನ್ ಸಾಯಿಕಿರಣ ಬಾಬ್ರೇಕರ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಸದಸ್ಯರು, ಪತ್ರಕರ್ತರು, ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.