ಯಲ್ಲಾಪುರ: ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆ ಕಾರ್ಯವೈಖರಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ತಾಲೂಕಿನ ಮಾವಿನಮನೆ ಪಂಚಾಯತ ವ್ಯಾಪ್ತಿಯ ಬಾಸಲ್, ಬಾರೆ ತಿಮ್ಮಾನಿ, ಮಲವಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದನ್ನು ತಡೆಗಟ್ಟಬೇಕಾದ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಮಾತ್ರ ಗಾಢ ನಿದ್ರೆಗೆ ಜಾರಿದೆಯಾ ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಮೂಡುತ್ತಿದೆ. ಬಾಸಲ್ ಗ್ರಾಮದಲ್ಲಿ ಎರಡು ಕಡೆ ಅಂಗಡಿಯಲ್ಲಿ ಮಾರಾಟ ನಡೆಸುತ್ತಿದ್ದರೆ, ಒಂದು ಕಡೆ ಮನೆಯಲ್ಲಿ ಮಾರಾಟ ನಡೆಯುತ್ತಿದೆ. ಇನ್ನು ಬಾರೆ ತಿಮ್ಮಾನಿಯಲ್ಲಿ ಒಟ್ಟು 3 ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಮಲವಳ್ಳಿಯಲ್ಲಿ ವ್ಯಕ್ತಿಯೋರ್ವರು ಮನೆಯಲ್ಲಿ ಮಾರುತ್ತಿದ್ದಾರೆ ಎನ್ನಲಾಗಿದೆ.
ಇದು ಬಹುತೇಕ ಸಾರ್ವಜನಿಕ ಅಕ್ರಮ ಮದ್ಯ ಮಾರಾಟ ಕೇಂದ್ರಗಳಾಗಿದ್ದು, ಇದರಲ್ಲಿ ಪ್ರತಿನಿತ್ಯ ಒಂದೊಂದು ಅಂಗಡಿಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮದ್ಯ ಮಾರಾಟ ನಡೆಯುತ್ತಿದೆ. ಅಕ್ರಮ ಮದ್ಯದ ಈ ಅಂಗಡಿಗಳಿಗೆ ಬಡ ಕೂಲಿ ಕಾರ್ಮಿಕರು, ರೈತರೇ ಗಿರಾಕಿಗಳು. ದಿನ ದುಡಿದ 300- 400 ರೂ. ಮದ್ಯದಂಗಡಿ ಪಾಲಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಇದರಿಂದಾಗಿ ಅದೆಷ್ಟೋ ಕುಟುಂಬಗಳು ಇವತ್ತಿಗೂ ತುತ್ತು ಅನ್ನಕ್ಕೂ ಪರದಾಡುವಂತಾಗಿದ್ದು, ಈ ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸುವುದೇ ದುಸ್ತರವಾಗಿದೆ.
ನ. 21ಕ್ಕೆ ಪ್ರತಿಭಟನೆ
ಕಳೆದ ನಾಲ್ಕೈದು ವರ್ಷಗಳ ಹಿಂದೆ ಇದೇ ರೀತಿ ಅಕ್ರಮವಾಗಿ ಮದ್ಯ ಮಾರಾಟ ವಿಪರೀತವಾಗಿದ್ದಾಗ ಸ್ಥಳೀಯರು ಪ್ರತಿಭಟನೆ ನಡೆಸಿದ ಪರಿಣಾಮ ಮದ್ಯ ಮಾರಾಟ ಬಂದ್ ಆಗಿತ್ತು. ಆದರೆ ಈಗ ಮತ್ತೆ ಅಕ್ರಮವಾಗಿ ಮದ್ಯ ಮಾರಾಟ ವಿಪರೀತವಾಗಿದೆ. ಈ ಕಾರಣದಿಂದ ನ.21ರ ಸೋಮವಾರ ಬೆಳಿಗ್ಗೆ 9.30ಕ್ಕೆ ಮಲವಳ್ಳಿಯಲ್ಲಿರುವ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.